ಲಕ್ನೋ: 8 ವರ್ಷದ ಮಗ ತುಂಬಿ ಹರಿಯುತ್ತಿದ್ದ ಚರಂಡಿಗೆ ಬಿದ್ದು ಮೃತಪಟ್ಟ ಸುದ್ದಿ ಕೇಳಿ ಆತ್ಘಾತಕ್ಕೊಳಗಾದ ತಾಯಿ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ರಾಮ್‌ಪುರದಲ್ಲಿ ಈ ದುರಂತ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ೮ ವರ್ಷದ ಬಾಲಕ ಅಮನ್ ತುಂಬಿ ಹರಿಯುತ್ತಿದ್ದ ತೆರೆದ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ.
ರಾಮ್‌ಪುರದ ಕೊತ್ವಾಲಿ ಸಿವಿಲ್ ಲೈನ್ಸ್ ವ್ಯಾಪ್ತಿಯ ಅಜಿತ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜಮೀರ್ ಅಹ್ಮದ್ ಅವರ ಮಗ ಅಮನ್ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ. ಶಾಲೆ ಮುಗಿಸಿ ತನ್ನ ಅಣ್ಣನೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅಮನ್ ಚರಂಡಿಗೆ ಬಿದ್ದಿದ್ದನ್ನು ನೋಡಿದ ಆತನ ಅಣ್ಣ ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಅಮನ್‌ನ ಮೃತದೇಹ ಪತ್ತೆಯಾಗಿದೆ. ಚರಂಡಿಯೊಳಗಿದ್ದ ಕಬ್ಬಿಣದ ರಾಡ್‌ಗೆ ನೇತಾಡುತ್ತಿದ್ದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಬಾಲಕ ಮೃತಪಟ್ಟಿದ್ದ.
ಮಗನ ಸಾವಿನ ಸುದ್ದಿ ಕೇಳಿ ಆಘಾತಗೊಂಡ ತಾಯಿ ನಗ್ಮಾ ಮನೆಯಲ್ಲಿ ಇಟ್ಟಿದ್ದ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಜಿತ್‌ಪುರದ ಹಲವು ಕಡೆ ಚರಂಡಿಗಳು ತೆರೆದಿದ್ದರೂ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ. ಮಳೆ ಬಂದಾಗ ತೆರೆದ ಚರಂಡಿಗಳು ಅಪಾಯಕಾರಿಯಾಗುತ್ತವೆ. ಇದರಿಂದ ದುರಂತಗಳು ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಪ್ರದೇಶದಲ್ಲಿ ಸುಮಾರು 20ರಿಂದ 25 ದಿನಗಳ ಹಿಂದೆಯೂ ಏಳು ವರ್ಷದ ಬಾಲಕನೊಬ್ಬ ಚರಂಡಿಯಲ್ಲಿ ಬಿದ್ದು ಮೃತಪಟ್ಟಿದ್ದ. ಪದೇ ಜೀವಹಾನಿ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಚರಂಡಿ ಸರಿಪಡಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

