HomeKarnatakaಒಬ್ಬ ಸಚಿವರಿಗಾಗಿ ಇಡೀ ಸದನ ಹಾಳು ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ: ನಾಗೇಂದ್ರ ರಾಜೀನಾಮೆ ನೀಡುವವರೆಗೂ ನಮ್ಮ...

ಒಬ್ಬ ಸಚಿವರಿಗಾಗಿ ಇಡೀ ಸದನ ಹಾಳು ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ: ನಾಗೇಂದ್ರ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ: ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಒಬ್ಬ ಸಚಿವನನ್ನು ಉಳಿಸಿಕೊಳ್ಳಲು ಸದನವನ್ನು ಹಾಳು ಮಾಡುತ್ತಿದೆ. ಸಚಿವ ನಾಗೇಂದ್ರ ರಾಜೀನಾಮೆ ನೀಡುವವರೆಗೂ ಬಿಜೆಪಿ-ಜೆಡಿಎಸ್‌ ಹೋರಾಟ ಮಾಡಲಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಒಬ್ಬ ಸಚಿವನಿಗಾಗಿ ಕಾಂಗ್ರೆಸ್‌ ಸರ್ಕಾರ ಸದನ ನಡೆಯಲು ಬಿಡುತ್ತಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಲೂಟಿ ಮಾಡಿ 600 ಖಾತೆಗಳಿಗೆ, ಸಚಿವ ಬಿ.ನಾಗೇಂದ್ರ ಅವರ ಬಂಧುಗಳ ಹೆಸರಿಗೆ ಮಾಡಿಕೊಳ್ಳಲಾಗಿದೆ. ಈ ಹಣ ಬಳ್ಳಾರಿಯ ಚುನಾವಣೆಗೆ ಹಾಗೂ ಬೇರೆ ಬೇರೆ ಚುನಾವಣೆಗಳಿಗೆ ಬಳಕೆಯಾಗಿದೆ ಎಂಬುದು ಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿದಿದೆ. ಇಡಿ ಹಾಗೂ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಪ್ರಮುಖವಾದ ಕಿಂಗ್‌ಪಿನ್‌ ಇವರೇ ಆಗಿದ್ದಾರೆ. 1.20 ಕೋಟಿ ರೂ. ಹಣ ನಾಗೇಂದ್ರ ಅವರ ಖಾತೆಗೆ ನೇರವಾಗಿ ಹೋಗಿದೆ ಎಂದರು.

ಸದನಕ್ಕೆ ಕಾಂಗ್ರೆಸ್‌ ಶಾಸಕರು ಕೂಡ ಬರುತ್ತಿಲ್ಲ. ಹೊಸದಾಗಿ ಸಚಿವರಾದವರು ಹೈಕಮಾಂಡ್‌ಗೆ ಹಣ ನೀಡಿದ್ದಾರೆ ಎಂದು ಕಾಂಗ್ರೆಸ್‌ ಶಾಸಕರು ಬೀದಿಬೀದಿಯಲ್ಲಿ ಮಾತಾಡುತ್ತಿದ್ದಾರೆ. ನಾಗೇಂದ್ರ ಅವರು ರಾಹುಲ್‌ ಗಾಂಧಿಗೆ ಪೇಮೆಂಟ್‌ ಮಾಡಿ ಸಚಿವರಾಗಿದ್ದಾರೆ. ನಾವು ಯಾವುದೇ ವ್ಯಕ್ತಿ ವಿರುದ್ಧ ಹೋರಾಟ ಮಾಡುತ್ತಿಲ್ಲ. ಲೂಟಿಯಾದ ದಲಿತರ ಹಣ ಮರಳಿ ಬರಬೇಕೆಂದು ಹೋರಾಡುತ್ತಿದ್ದೇವೆ. ಅನೇಕ ದಲಿತರು ಆ ಹಣಕ್ಕಾಗಿ ಕಾಯುತ್ತಿದ್ದಾರೆ. ಸಚಿವ ಡಾ.ಜಿ.ಪರಮೇಶ್ವರ್‌ ಅವರು ಸದನಕ್ಕೆ ಬಂದು ನಾಗೇಂದ್ರ ಅವರಿಗೆ ವಾಶಿಂಗ್‌ ಪೌಡರ್‌ ಹಾಕಿ ಸ್ವಚ್ಛ ಮಾಡಲು ನೋಡಿದ್ದಾರೆ. ದಲಿತ ನಾಯಕರಾದ ಪರಮೇಶ್ವರ್‌ ಅವರಿಗೆ ಈ ಗತಿ ಬರಬಾರದಾಗಿತ್ತು. ಮನಸ್ಸಾಕ್ಷಿ ಇದ್ದಿದ್ದರೆ ಎಲ್ಲ ಸಚಿವರು ರಾಜೀನಾಮೆ ನೀಡಬೇಕಿತ್ತು. ಆದರೆ ಎಲ್ಲರೂ ನಾಗೇಂದ್ರ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾವೀಗ ಬರಗಾಲದ ಬಗ್ಗೆ, ಬಿಡದಿ ಟೌನ್‌ಶಿಪ್‌, ಕೆಪಿಎಸ್‌ಸಿ ಹಗರಣ, ನೈಸ್‌ ಟೋಲ್‌ ವಸೂಲಿ ಬಗ್ಗೆ ಚರ್ಚೆ ಮಾಡಬೇಕಿದೆ. ಧಾರವಾಡದಲ್ಲಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳನ್ನು ಬಂಧಿಸಿ ಜೈಲಿಗೆ ಕಳಿಸಲಾಗುತ್ತಿದೆ. ಈ ಎಲ್ಲದರ ವಿರುದ್ಧ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಒಬ್ಬ ಭ್ರಷ್ಟ ವ್ಯಕ್ತಿಯನ್ನು ರಕ್ಷಣೆ ಮಾಡಲು ಯತ್ನಿಸುತ್ತಿದೆ. ಆದರೆ ಬಿಜೆಪಿ ಲಕ್ಷಾಂತರ ದಲಿತರಿಗೆ ಹಣ ವಾಪಸ್‌ ನೀಡಲು ಶ್ರಮಿಸುತ್ತಿದೆ. ಯಾರು ಸರಿ ಎಂದು ಜನರು ತೀರ್ಮಾನಿಸುತ್ತಾರೆ. ದಲಿತರ ಹಣ ವಾಪಸ್‌ ಬರಲೆಂದು ನಾವು ಹೋರಾಟ ಮಾಡಿದರೂ ಕಾಂಗ್ರೆಸ್‌ ಶಾಸಕರು ಮೌನವಾಗಿ ಕೂತಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಮುಂದುವರಿಯಲಿದೆ ಎಂದರು.

ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ವರ್ಗದ ಇನ್ನಷ್ಟು ಶಾಸಕರಿದ್ದಾರೆ. ಅಂತಹವರನ್ನು ಸಚಿವರನ್ನಾಗಿ ಮಾಡಿ. ನಾಗೇಂದ್ರ ರಾಜೀನಾಮೆ ನೀಡುವವರೆಗೂ ಬಿಜೆಪಿ-ಜೆಡಿಎಸ್‌ ಇನ್ನಷ್ಟು ಹೋರಾಟ ಮಾಡಲಿದೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular