ನಲಂದಾ: ಉಪ್ಪಿನ ಬದಲು ಡಿಟರ್ಜೆಂಟ್ ಪೌಡರ್ (ಸೋಪಿನ ಪುಡಿ) ಬೆರೆಸಿದ ಬಿಸಿಯೂಟ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಆಘಾತಕಾರಿ ಘಟನೆ ಬಿಹಾರದ ನಲಂದಾದಲ್ಲಿ ನಡೆದಿದೆ. ಅಸ್ವಸ್ಥ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಲಂದಾದ ಪಾರಸಿ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಗೆ ಮತ್ತೊಂದು ಶಾಲೆಯಿಂದ ಬಿಸಿಯೂಟ ಸರಬರಾಜಾಗಿತ್ತು. ಬಿಸಿಯೂಟದಲ್ಲಿದ್ದ ಸೋಯಾಬಿನ್ ಸಾರುಗೆ ಉಪ್ಪು ಕಡಿಮೆಯಾಗಿದ್ದರಿಂದ, ವಿದ್ಯಾರ್ಥಿಗಳಿಗೆ ಉಪ್ಪು ತರುವಂತೆ ಶಿಕ್ಷಕಿ ಸೂಚಿಸಿದ್ದರು ಎನ್ನಲಾಗಿದೆ.
ಆದರೆ, ವಿದ್ಯಾರ್ಥಿಗಳು ಡಿಟರ್ಜೆಂಟ್ ಪೌಡರ್ ಅನ್ನು ಉಪ್ಪು ಎಂದು ತಪ್ಪಾಗಿ ಭಾವಿಸಿ ತಂದಿದ್ದಾರೆ. ಅದನ್ನು ಶಿಕ್ಷಕಿ ಕೂಡ ಪರಿಶೀಲಿಸದೆ ಸಾರಿಗೆ ಬೆರೆಸಿದ್ದಾರೆ ಎನ್ನಲಾಗಿದೆ. ಬಳಿಕ ಈ ಬಿಸಿಯೂಟವನ್ನು ಸೇವಿಸಿದ ವಿದ್ಯಾರ್ಥಿಗಳಿಗೆ ಏಕಾಏಕಿ ಹೊಟ್ಟೆ ನೋವು, ವಾಂತಿ ಹಾಗೂ ಬೇಧಿ ಕಾಣಿಸಿಕೊಂಡಿದೆ.
ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದ ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ವಿಚಾರಣೆ ನಡೆಸಿದಾಗ ಬಿಸಿಯೂಟಕ್ಕೆ ಉಪ್ಪಿನ ಬದಲು ಸೋಪಿನ ಪುಡಿ ಬೆರೆಸಿರುವುದು ಬೆಳಕಿಗೆ ಬಂದಿದೆ.
40 ಮಕ್ಕಳಿಗೆ ಚಿಕಿತ್ಸೆ
ಅಸ್ವಸ್ಥಗೊಂಡಿರುವ 40 ವಿದ್ಯಾರ್ಥಿಗಳನ್ನು ಬಿಹಾರದ ಶರೀಫ್ ಮಾದರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಸರ್ಜನ್ ಡಾ. ಜೈಪ್ರಕಾಶ್ ಸಿಂಗ್ ಅವರ ಪ್ರಕಾರ, ಆಹಾರ ವಿಷಬಾಧೆಯಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಸದ್ಯ ಎಲ್ಲಾ ಮಕ್ಕಳಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ವಿದ್ಯಾರ್ಥಿಗೂ ಪ್ರಾಣಾಪಾಯವಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

