ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸು ಇಡ್ಲಿ ಜೊತೆಗೆ ಚೀನಾದ ಮಂಚೂರಿ ಮಿಶ್ರಣವೇ ಈ ಸ್ಪೆಷಲ್ ರೆಸಿಪಿ. ಮನೆಯಲ್ಲಿ ಬೆಳಗ್ಗೆ ಮಾಡಿದ ಇಡ್ಲಿ ಉಳಿದು ಹೋದ್ರೆ ಅದರಿಂದ ಸಂಜೆಗೆ ಸೂಪರ್ ಆಗಿ ಸ್ನಾಕ್ಸ್ ಮಾಡಬಹುದು.
ಬೇಕಾಗುವ ಸಾಮಗ್ರಿ : 5 ಇಡ್ಲಿ, ಅರ್ಧ ಕಪ್ ಮೈದಾ, ಕಾಲು ಕಪ್ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಅಚ್ಚಖಾರದ ಪುಡಿ, ಕಾಲು ಚಮಚ ಕಾಳು ಮೆಣಸಿನ ಪುಡಿ, ಒಂದು ಚಮಚ ಸೋಯಾ ಸಾಸ್, ನೀರು, ಕರಿಯಲು ಎಣ್ಣೆ.
ಸಾಸ್ ತಯಾರಿಸಲು ಸಾಮಾಗ್ರಿ : 2 ಚಮಚ ಎಣ್ಣೆ, ಸಣ್ಣಗೆ ಹೆಚ್ಚಿದ ಅರ್ಧ ಈರುಳ್ಳಿ, ಸಣ್ಣಗೆ ಹೆಚ್ಚಿದ ಒಂದು ಇಂಚು ಶುಂಠಿ, ಹೆಚ್ಚಿದ ಮೂರು ಬೆಳ್ಳುಳ್ಳಿ ಎಸಳು, ಸಣ್ಣಗೆ ಹೆಚ್ಚಿದ ಅರ್ಧ ಕ್ಯಾಪ್ಸಿಕಂ, ಕಾಲು ಕಪ್ ನಷ್ಟು ಟೊಮೆಟೋ ಸಾಸ್, 1 ಚಮಚ ಚಿಲ್ಲಿ ಸಾಸ್, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ವಿನಿಗರ್, 2 ಚಮಚ ಸೋಯಾ ಸಾಸ್, ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್.
ತಯಾರಿಸುವ ವಿಧಾನ : ಇಡ್ಲಿಯನ್ನು ನಾಲ್ಕು ಹೋಳುಗಳಾಗಿ ಮಾಡಿ ಪಕ್ಕಕ್ಕಿಡಿ. ದೊಡ್ಡ ಬೌಲ್ ನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಅಚ್ಚ ಖಾರದ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್ ಹಾಕಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ನೀರು ಹಾಕಿ ಕಲೆಸಿಕೊಳ್ಳಿ. ಮೃದುವಾದ ಹಿಟ್ಟನ್ನು ತಯಾರಿಸಿ. ಇಡ್ಲಿಯ ತುಂಡನ್ನು ಈ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಗರಿಗರಿಯಾಗುವವರೆಗೂ ಅದನ್ನು ಕರಿಯಿರಿ. ಕಿಚನ್ ಪೇಪರ್ ನಲ್ಲಿ ಅದನ್ನಿಟ್ಟು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಿ.
ಬಾಣಲೆ ತೆಗೆದುಕೊಂಡು 2 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಹೆಚ್ಚಿದ ಈರುಳ್ಳಿ ಹಾಕಿ ಒಂದು ನಿಮಿಷ ಹುರಿಯಿರಿ. ನಂತರ ಹೆಚ್ಚಿದ ಬೆಳ್ಳುಳ್ಳು ಶುಂಠಿ ಹಾಕಿ ತಿರುವಿ. ಖಾರ ಬೇಕಾದರೆ ಹೆಚ್ಚಿದ ಹಸಿಮೆಣಸನ್ನು ಕೂಡ ಹಾಕಬಹುದು. ನಂತರ ಕ್ಯಾಪ್ಸಿಕಂ ಹಾಕಿ ಹುರಿಯಿರಿ. ಟೊಮೆಟೋ ಸಾಸ್, ಚಿಲ್ಲಿ ಸಾಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. 2 ಚಮಚ ಸೋಯಾ ಸಾಸ್ ಮತ್ತು ವಿನಿಗರ್ ಹಾಕಿ ಚೆನ್ನಾಗಿ ಬೆರೆಸಿ ಒಂದು ನಿಮಿಷ ಬೇಯಿಸಿ. ನಂತರ ಕರಿದಿಟ್ಟ ಇಡ್ಲಿಯನ್ನು ಹಾಕಿ ಸಾಸ್ ಚೆನ್ನಾಗಿ ಹೀರಿಕೊಳ್ಳುವವರೆಗೂ ಮಿಕ್ಸ್ ಮಾಡಿ. ಕೊನೆಯಲ್ಲಿ ಸ್ಪ್ರಿಂಗ್ ಆನಿಯನ್ ಹಾಕಿ ಅಲಂಕರಿಸಿದ್ರೆ ಇಡ್ಲಿ ಮಂಚೂರಿ ರೆಡಿ.