ನವದೆಹಲಿ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಧ್ವಾಜಾರೋಹಣದ ವೇಳೆ ‘ವಂದೇ ಮಾತರಂ’ ಗೀತೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಪಮಾನ ಮಾಡಿದ್ದಾರೆ ಎಂಬ ಆರೋಪ, ವಿವಾದದ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೊಸ ವಿವಾದ ಸೃಷ್ಟಿಸಿದ್ದಾರೆ. ನಾವು ಯಾವುದೇ ಕಾರಣಕ್ಕೂ ವಂದೇ ಮಾತರಂ ಗೀತೆ ಪೂರ್ತಿ ಹಾಡಲ್ಲ ಎಂದಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲ. ಎರಡು ಪ್ಯಾರಾಗಳನ್ನಷ್ಟೇ ಹಾಡಲಾಗುವುದು ಎಂದು ತಿಳಿಸಿದ್ದಾರೆ.
ವಂದೇ ಮಾತರಂಗೆ ಕಾಂಗ್ರೆಸ್ ವಿರೋಧವಿಲ್ಲ. ಆದರೆ ಬಂಕಿಮಚಂದ್ರ ಚಟರ್ಜಿ ಬರೆದಿರುವ ಗೀತೆಯ ಎರಡು ಪ್ಯಾರಾಗಳನ್ನು ಮಾತ್ರ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಹಾಡುತ್ತೇವೆ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರು ವಂದೇ ಮಾತರಂಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ನೇಣು ಹಾಕಿದರೂ, ಜೈಲಿಗೆ ಹಾಕಿದರೂ ನಾವು ವಂದೇ ಮಾತರಂ ಹಾಡುವುದು ಎರಡು ಪ್ಯಾರಾ ಮಾತ್ರ ಎಂದಿದ್ದಾರೆ.
ವಂದೇ ಮಾತರಂ ಅನ್ನು ಕಡ್ಡಾಯಗೊಳಿಸುವ ಮೂಲಕ ರಾಷ್ಟ್ರಗೀತೆ ‘ಜನಗಣಮನ’ವನ್ನು ಎರಡನೇ ದರ್ಜೆಗೆ ತರುವ ಪ್ರಯತ್ನ ನಡೆಯುತ್ತಿದೆ. ಈ ಮೂಲಕ ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಚಿಹ್ನೆಗೆ ಬಿಜೆಪಿ ಮತ್ತು ಆರ್ಎಸ್ಎಸ್ ಅಪಮಾನ ಮಾಡಿದೆ ಎಂದು ಆರೋಪಿಸಿದರು.
ನಾವು ವಂದೇ ಮಾತರಂ ವಿರುದ್ಧ ಇಲ್ಲ. ಆದರೆ, ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡುವುದಿಲ್ಲ. ಎರಡು ಪ್ಯಾರಾಗಳನ್ನು ಮಾತ್ರ ಹಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಸರ್ಕಾರದ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಸರ್ಕಾರ ಜನರಿಂದ ಆಯ್ಕೆಯಾಗಿದೆ. ಕಾನೂನು ಪಾಲನೆ ಮಾಡಲಿ, ನಮ್ಮ ಆಕ್ಷೇಪವಿಲ್ಲ ಎಂದರು.
ಆರ್ಎಸ್ಎಸ್ ಹಾಗೂ ಹಿಂದೂ ಮಹಾಸಭಾದ ಚಟುವಟಿಕೆಗಳನ್ನು ಪ್ರಸ್ತಾಪಿಸಿದ ಹರಿಪ್ರಸಾದ್, ‘ ನಮಸ್ತೆ ಸದಾ ವತ್ಸಲೇ’ಯನ್ನು ರಾಷ್ಟ್ರಗೀತೆ ಎಂದು ಪರಿಗಣಿಸಬಹುದೇ ಎಂದು ಪ್ರಶ್ನಿಸಿದರು. ‘ಆಜಾದ್ ಹಿಂದ್ ಜಿಂದಾಬಾದ್, ಇಂಕಲಾಬ್ ಜಿಂದಾಬಾದ್ ಘೋಷಣೆಗಳನ್ನು ಬಿಜೆಪಿಯವರು ಕೂಗುತ್ತಾರೆಯೇ’ ಎಂದು ಪ್ರಶ್ನಿಸಿದ ಅವರು, ವಂದೇ ಮಾತರಂ ವಿಚಾರವನ್ನು ಮುಂದಿಟ್ಟುಕೊಂಡು ದೇಶದಲ್ಲಿ ಸೌಹಾರ್ದತೆ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ವಂದೇ ಮಾತರಂಗೆ ಅವಮಾನ ಮಾಡಿದ್ದಾರೆ ಎಂಬ ಸೋನಿಯಾ ಗಾಂಧಿ ವಿರುದ್ಧದ ಆರೋಪ ಆರ್ಎಸ್ಎಸ್ನ ಕುತಂತ್ರ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ಕೇಳಿದವರು ಸೋನಿಯಾ ಗಾಂಧಿ ಎಂಬ ಆರೋಪ ಮಾಡುತ್ತಿದ್ದಾರೆ. 2024ಕ್ಕೂ ಮುನ್ನ ಸಂವಿಧಾನ ಬದಲಿಸಲು ಬಿಜೆಪಿ ಮುಂದಾಗಿತ್ತು, ಆದರೆ ಜನರು ಸೂಕ್ತ ಉತ್ತರ ನೀಡಿದ್ದಾರೆ ಎಂದು ಹೇಳಿದರು.

