ಬೆಂಗಳೂರು: ಬಿಡದಿ ಟೌನ್ ಶಿಪ್ ವಿರೋಧಿಸಿ ಜೆಡಿಎಸ್ ಮಂಗಳವಾರ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ(ಫ್ರೀಡಂ ಪಾರ್ಕ್) ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಆಗಸ್ಟ್ 18ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿಭಟನೆ ನಡೆಸಲಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಕೆಜಿ ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತದಿಂದ ಬಲ ತಿರುವು ಪಡೆದು ಫ್ರೀಡಂ ಪಾರ್ಕ್ ಕಡೆಗೆ ಬರುವ ವಾಹನಗಳು ಕಡ್ಡಾಯವಾಗಿ ಪ್ಯಾಲೇಸ್ ರಸ್ತೆಯ ಮಹಾರಾಣಿ ಅಂಡರ್ ಪಾಸ್ ರಸ್ತೆ ಬಳಸುವುದು.
ಫ್ರೀಡಂ ಪಾರ್ಕ್ ಜಂಕ್ಷನ್ ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಮತ್ತು ಹೋಗುವ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಖೋಡೆ ಜಂಕ್ಷನ್ ಕಡೆಯಿಂದ ಕೆಆರ್ ಸರ್ಕಲ್ ಕಡೆಗೆ ಹೋಗುವ ವಾಹನ ಸವಾರರು ಫ್ಲೈಓವರ್ ರಸ್ತೆಯಲ್ಲಿ ತೆರಳಬಹುದು. ವಾಹನ ದಟ್ಟಣೆ ತಡೆಗಟ್ಟಲು ಹಳೆ ಜೆಡಿಎಸ್ ಕಚೇರಿ ರಸ್ತೆ ಬಳಸಬಹುದಾಗಿದೆ ಎಂದು ಹೇಳಲಾಗಿದೆ.
ಸುಬ್ಬಣ್ಣ ಜಂಕ್ಷನ್ ನಿಂದ ಎಂಟಿಆರ್ ಜಂಕ್ಷನ್ ಕಡೆಗೆ ಬರುವ ರಸ್ತೆಯು ಹಾಲಿ ಏಕಮುಖ ಸಂಚಾರ ರಸ್ತೆಯಾಗಿದ್ದು, ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಪರಿವರ್ತಿಸಲಾಗಿರುತ್ತದೆ, ಗಾಂಧಿನಗರದ ಕಡೆಗೆ ಬರುವ ವಾಹನಗಳು ಸದರಿ ರಸ್ತೆ ಬಳಸಬಹುದಾಗಿದೆ, ಖೋಡೆ ಜಂಕ್ಷನ್ ನಿಂದ ಮಹಾರಾಣಿ ಜಂಕ್ಷನ್ ವರೆಗೆ ವೈ. ರಾಮಚಂದ್ರ ರಸ್ತೆ ಮತ್ತು ಕಾಳಿದಾಸ ರಸ್ತೆ, ಪ್ಯಾಲೇಸ್ ರಸ್ತೆ, ಕೆಜಿ ರಸ್ತೆಯಲ್ಲಿ ಯಾವುದೇ ರೀತಿಯ ವಾಹನಗಳ ಪಾರ್ಕಿಂಗ್ ಗೆ ಅವಕಾಶ ಇರುವುದಿಲ್ಲ ಎಂದು ಸೂಚನೆ ನೀಡಲಾಗಿದೆ.

