ದೇಶದಲ್ಲಿ ವಿಮಾನ ಟಿಕೆಟ್ ದರಗಳು, ಸರ್ಜ್ ಪ್ರೈಸಿಂಗ್ ಹಾಗೂ ಹೆಚ್ಚುವರಿ ಲಗೇಜ್ ಶುಲ್ಕಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಸರ್ಕಾರ ನಿಗದಿಪಡಿಸಿರುವ ದರ ನಿಯಮಗಳನ್ನು ಪಾಲಿಸದ ವಿಮಾನಯಾನ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಅಂತಹ ವಿಮಾನಯಾನ ಸಂಸ್ಥೆಗಳ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಇದೇ ವೇಳೆ, ವಿಮಾನ ದರಗಳಿಗೆ ಸಂಬಂಧಿಸಿದ ಅಂತಿಮ ನಿಯಮಗಳನ್ನು ಮೂರು ವಾರಗಳಲ್ಲಿ ಅಧಿಸೂಚನೆ ಹೊರಡಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್’ಗೆ ತಿಳಿಸಿದೆ.
ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಹೊಸ ವಿಮಾನ ದರ ನಿಯಮಗಳನ್ನು ಸೋಮವಾರ ಸುಪ್ರೀಂ ಕೋರ್ಟ್’ಗೆ ಸೀಲ್ಡ್ ಕವರ್ನಲ್ಲಿ ಸಲ್ಲಿಸಿದೆ. ನಿಯಮಗಳ ರೂಪಿಸುವ ಪ್ರಕ್ರಿಯೆಯನ್ನು ವೇಗಗೊಳಿಸಿರುವುದಾಗಿ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಆದರೆ ಕೆಲವು ಅಂಶಗಳ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದೆ. ಹೊಸ ನಿಯಮಗಳು ಜಾರಿಗೆ ಬರುವವರೆಗೆ ವಿಮಾನ ದರಗಳಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವಾಲಯದ ಕಚೇರಿ ಮೆಮೊಗಳನ್ನು ಮಾರ್ಗಸೂಚಿಗಳಾಗಿ ಬಳಸಲಾಗುತ್ತಿದೆ ಎಂದು ತಿಳಿಸಿದೆ.
ವಿಮಾನಯಾನ ಸಂಸ್ಥೆಗಳ ವಿರುದ್ಧ ಕ್ರಮ
ಪ್ರಸ್ತುತ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕೆಲವು ವಿಮಾನಯಾನ ಸಂಸ್ಥೆಗಳು ಪಾಲಿಸುತ್ತಿಲ್ಲ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ನ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಸರ್ಕಾರದ ಆದೇಶಗಳನ್ನು ಉಲ್ಲಂಘಿಸುವ ವಿಮಾನಯಾನ ಸಂಸ್ಥೆಗಳ ವಿರುದ್ಧ ಕಠಿಣವಾಗಿ ವರ್ತಿಸುವಂತೆ ಸೂಚಿಸಿತು. ನಿಯಮಗಳನ್ನು ಪಾಲಿಸದ ವಿಮಾನಯಾನ ಸಂಸ್ಥೆಗಳ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಕೇಂದ್ರಕ್ಕೆ ಸ್ಪಷ್ಟಪಡಿಸಿದೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ವಿಮಾನ ಪ್ರಯಾಣಿಕರ ಮೇಲೆ ಪರಿಣಾಮ ಬೀರುವ ಹಲವು ಅಂಶಗಳನ್ನು ಹೊಸ ನಿಯಮಗಳಲ್ಲಿ ಸೇರಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಪ್ರಮುಖವಾಗಿ ವಿಮಾನ ಟಿಕೆಟ್ ದರ ನಿಯಂತ್ರಣ, ಸರ್ಜ್ ಪ್ರೈಸಿಂಗ್, ಹೆಚ್ಚುವರಿ ಲಗೇಜ್ ಶುಲ್ಕ ಹಾಗೂ ದರಗಳಲ್ಲಿ ಪಾರದರ್ಶಕತೆ ಸೇರಿದಂತೆ ಹಲವು ಅಂಶಗಳಿಗೆ ಸಂಬಂಧಿಸಿದ ನಿಯಮಗಳು ಇರಲಿವೆ.
ವಿಮಾನ ಟಿಕೆಟ್ ದರಗಳಲ್ಲಿ ಆಗಾಗ್ಗೆ ಕಂಡುಬರುವ ಭಾರಿ ಏರಿಳಿತ ಹಾಗೂ ಪ್ರಯಾಣಿಕರಿಂದ ವಸೂಲಾಗುತ್ತಿರುವ ಹೆಚ್ಚುವರಿ ಶುಲ್ಕಗಳನ್ನು ನಿಯಂತ್ರಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಯುತ್ತಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟಿಸ್ ವಿಕ್ರಮ್ ನಾಥ್ ಹಾಗೂ ಜಸ್ಟಿಸ್ ಸಂದೀಪ್ ಮೆಹ್ತಾ ಅವರ ಪೀಠವು ಜುಲೈನಲ್ಲೇ ಪ್ರಸ್ತಾಪಿತ ವಿಮಾನಯಾನ ನಿಯಮಗಳನ್ನು ಸೀಲ್ಡ್ ಕವರ್ನಲ್ಲಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಆಗ ನಿಯಮಗಳನ್ನು ರೂಪಿಸಲಾಗಿದ್ದು, ಅವುಗಳನ್ನು ಸಂಸತ್ತಿನ ಮುಂದೆ ಮಂಡಿಸುವ ಮುನ್ನ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ ನಿಯಮಗಳನ್ನು ಎರಡು ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪೀಠ ಸೂಚಿಸಿತ್ತು.
ಸಾಮಾಜಿಕ ಕಾರ್ಯಕರ್ತ ಎಸ್. ಲಕ್ಷ್ಮೀನಾರಾಯಣನ್ ಸಲ್ಲಿಸಿರುವ ಅರ್ಜಿಯಲ್ಲಿ ವಿಮಾನ ಟಿಕೆಟ್ ದರಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಹಾಗೂ ಕಡ್ಡಾಯ ನಿಯಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗಿದೆ. ಸರ್ಜ್ ಪ್ರೈಸಿಂಗ್, ಲಗೇಜ್ ಶುಲ್ಕ, ಟಿಕೆಟ್ ರದ್ದುಪಡಿಸುವಿಕೆ ಹಾಗೂ ಮರುಪಾವತಿ ನಿಯಮಗಳ ಮೇಲೂ ನಿಯಂತ್ರಣ ಅಗತ್ಯ ಎಂದು ಅರ್ಜಿದಾರರು ತಿಳಿಸಿದ್ದಾರೆ. ಪ್ರಯಾಣಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಅಧಿಕಾರ ಹೊಂದಿರುವ ಸ್ವತಂತ್ರ ವಿಮಾನಯಾನ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.
ಹಿಂದೆಯೂ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್
ವಿಮಾನ ಟಿಕೆಟ್ ದರಗಳಲ್ಲಿ ಹಠಾತ್ ಬದಲಾವಣೆಗಳ ಕುರಿತು ಸುಪ್ರೀಂ ಕೋರ್ಟ್ ಈ ಹಿಂದೆಯೂ ಕಳವಳ ವ್ಯಕ್ತಪಡಿಸಿತ್ತು. ಹಬ್ಬಗಳು ಹಾಗೂ ಬೇಡಿಕೆ ಹೆಚ್ಚಿರುವ ಸಂದರ್ಭಗಳಲ್ಲಿ ವಿಮಾನ ಟಿಕೆಟ್ ದರಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುವುದನ್ನು ನ್ಯಾಯಾಲಯವು “ಗಂಭೀರ ಕಳವಳಕಾರಿ ವಿಚಾರ” ಎಂದು ಹೇಳಿತ್ತು.
ಜನವರಿಯಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಕುಂಭಮೇಳ ಹಾಗೂ ಇತರ ಹಬ್ಬಗಳ ಸಮಯದಲ್ಲಿ ವಿಮಾನ ಟಿಕೆಟ್ ದರಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದ ವಿಚಾರವನ್ನು ಪೀಠ ಪ್ರಸ್ತಾಪಿಸಿತ್ತು. ಮಾರ್ಚ್ನಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಉಂಟಾದ ವ್ಯತ್ಯಯಗಳು ಹಾಗೂ ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಏರಿಕೆಯಾದ ಇಂಧನ ದರಗಳನ್ನು ಉಲ್ಲೇಖಿಸಿ, ಈ ಅರ್ಜಿಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರ ಹೆಚ್ಚುವರಿ ಸಮಯ ಕೋರಿತ್ತು.
ಇದಕ್ಕೂ ನಡುವೆ, ಇಂಡಿಗೋ ವಿಮಾನಗಳ ರದ್ದತಿಯಿಂದ ದೇಶೀಯ ವಿಮಾನ ಸೇವೆಗಳ ಸಾಮರ್ಥ್ಯ ಕಡಿಮೆಯಾಗಿ, ಕೆಲವು ಮಾರ್ಗಗಳಲ್ಲಿ ಟಿಕೆಟ್ ದರಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್ನಲ್ಲಿ ದೇಶೀಯ ವಿಮಾನ ದರಗಳ ಮೇಲೆ ತಾತ್ಕಾಲಿಕ ಮಿತಿಗಳನ್ನು ವಿಧಿಸಿತ್ತು.
ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದ ಬಳಿಕ ಮಾರ್ಚ್ನಲ್ಲಿ ಆ ಮಿತಿಗಳನ್ನು ತೆಗೆದುಹಾಕಲಾಯಿತು. ಆದರೆ ವಿಮಾನಯಾನ ಸಂಸ್ಥೆಗಳು ದರಗಳನ್ನು ಸಮಂಜಸವಾಗಿ ಹಾಗೂ ಪಾರದರ್ಶಕವಾಗಿ ಇರಿಸಬೇಕು ಮತ್ತು ಪ್ರಯಾಣಿಕರ ಹಿತಾಸಕ್ತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು.
ಆ ತಾತ್ಕಾಲಿಕ ನೀತಿಯ ಪ್ರಕಾರ, 500 ಕಿಲೋಮೀಟರ್ ‘ವರೆಗೆ ಪ್ರಯಾಣಕ್ಕೆ ಏಕಮುಖ ಟಿಕೆಟ್ ದರವನ್ನು ₹7,500ಕ್ಕೆ ಹಾಗೂ 1,000ರಿಂದ 1,500 ಕಿಲೋಮೀಟರ್ಗಳ ನಡುವಿನ ಪ್ರಯಾಣಕ್ಕೆ, ದೆಹಲಿ-ಮುಂಬೈಯಂತಹ ಮಾರ್ಗಗಳಲ್ಲಿ ₹15,000ಕ್ಕೆ ಮಿತಿಗೊಳಿಸಲಾಗಿತ್ತು.
ಹೊಸ ಕಾನೂನು
ಭಾರತೀಯ ವಾಯುಯಾನ ಅಧಿನಿಯಮ, 2024ರ ಮೂಲಕ ನಾಗರಿಕ ವಿಮಾನಯಾನ ಹಾಗೂ ವಿಮಾನ ಸಾರಿಗೆ ಸೇವೆಗಳ ಆರ್ಥಿಕ ನಿಯಂತ್ರಣಕ್ಕೆ ಕೇಂದ್ರ ಸರ್ಕಾರಕ್ಕೆ ಅಧಿಕಾರ ದೊರೆತಿದೆ.
ವಿಮಾನಯಾನ ಸಂಸ್ಥೆಗಳ ಟ್ಯಾರಿಫ್ಗಳನ್ನು ಅನುಮೋದಿಸುವುದು, ತಿರಸ್ಕರಿಸುವುದು ಅಥವಾ ತಿದ್ದುಪಡಿ ಮಾಡುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವ ಅಧಿಕಾರವನ್ನೂ ಈ ಕಾನೂನು ಕೇಂದ್ರಕ್ಕೆ ನೀಡಿದೆ. ಟ್ಯಾರಿಫ್ ವ್ಯಾಪ್ತಿಯಲ್ಲಿ ಪ್ರಯಾಣಿಕರ ವಿಮಾನ ದರಗಳು, ಇತರ ಶುಲ್ಕಗಳು ಹಾಗೂ ಅವುಗಳ ಮೇಲೆ ಪರಿಣಾಮ ಬೀರುವ ನೀತಿಗಳು ಮತ್ತು ಸೇವೆಗಳೂ ಸೇರಿವೆ.

