ಮಂಗಳೂರು: ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಆಹಾರ ಮಳಿಗೆಗಳ ಮೇಲೆ ತಪಾಸಣೆ, ದಾಳಿ ಮುಂದುವರೆಯಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರಿನ ಕೆ.ಎಫ್.ಸಿ. ಫುಡ್ ಔಟ್ಲೆಟ್ ನಲ್ಲಿ ಕೊಳೆತ ಮಾಂಸ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಿಚನ್ ಮತ್ತು ಸ್ಟೋರ್ ಗಳಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾತ್ರ ಸಂಗ್ರಹಿಸಬೇಕು. ನೈರ್ಮಲ್ಯ ಕಾಪಾಡಬೇಕು ಎಂದು ಆಹಾರ ಮಳಿಗೆಗಳ ಪ್ರಾಂಚೈಗಳಿಗೆ ತಿಳಿಸಿದ್ದಾರೆ.
ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಬಹುದು, ತಪ್ಪಿತಸ್ಥರು ಎಷ್ಟೇ ದೊಡ್ಡವರಾಗಿದ್ದರೂ, ಸಣ್ಣವರಾಗಿದ್ದರು ಕ್ರಮ ಕೈಗೊಳ್ಳಲಾಗುತ್ತದೆ. ಜನರ ಆರೋಗ್ಯವೇ ಮುಖ್ಯ ಕಾಳಜಿಯಾಗಿದೆ ಎಂದು ತಿಳಿಸಿದ್ದಾರೆ.
ಕೋಪದಿಂದ, ಶಿಕ್ಷೆ ನೀಡುವ ಉದ್ದೇಶದಿಂದ ದಾಳಿ ನಡೆಸುವುದಲ್ಲ, ಆಹಾರ ಸುರಕ್ಷತೆಯಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಗುರುತಿಸಿ ಜನರಿಗೆ ವಾಸ್ತವ ಪರಿಸ್ಥಿತಿ ತಿಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈಗಾಗಲೇ ಅಧಿಕಾರಿಗಳು ಹಲವು ಕಡೆ ದಾಳಿ ಮಾಡಿ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ತಪಾಸಣೆ, ದಾಳಿಗಳು ಮುಂದುವರೆಯಲಿವೆ. ಪಿಜಿ, ಹಾಸ್ಟೆಲ್ ಗಳಲ್ಲಿಯೂ ತಪಾಸಣೆ ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

