ಬೆಂಗಳೂರು: ನಗರದ ಬೆಳ್ಳಂದೂರು ಸಮೀಪದ ಭೋಗನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗಾಗಿ ಅಕ್ರಮವಾಗಿ ಜಿಲೆಟಿನ್ ಬಳಸಿ ಕಲ್ಲಿನ ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂದೂರು ಠಾಣೆ ಪೊಲೀಸರು 800 ಕೆಜಿಗೂ ಹೆಚ್ಚು ಜಿಲೆಟಿನ್ ಅನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಶಾಲೆ ಸಮೀಪವೇ ಬ್ಲಾಸ್ಟಿಂಗ್ ಆರೋಪ
ಭೋಗನಹಳ್ಳಿಯಲ್ಲಿ ಆದರ್ಶ ಡೆವಲಪರ್ಸ್ಗೆ ಸಂಬಂಧಿಸಿದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ವೇಳೆ ದೊಡ್ಡ ಕಲ್ಲಿನ ಬಂಡೆಗಳು ಪತ್ತೆಯಾಗಿದ್ದು, ಅವುಗಳನ್ನು ತೆರವುಗೊಳಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಜಿಲೆಟಿನ್ ಬಳಸಿ ಸ್ಫೋಟಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಿರ್ಮಾಣ ಸ್ಥಳದ ಸಮೀಪವೇ ಶಾಲೆಯೊಂದಿದ್ದು, ರಾತ್ರಿ 12 ಗಂಟೆಯ ಬಳಿಕ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಶಾಲೆಯ ಸಮೀಪ ಸ್ಫೋಟಕ ವಸ್ತುಗಳನ್ನು ಬಳಸುತ್ತಿರುವುದರಿಂದ ಮಕ್ಕಳ ಸುರಕ್ಷತೆ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಪೊಲೀಸರಿಗೆ ದೂರು, ತನಿಖೆ ಆರಂಭ
ಸ್ಥಳೀಯರ ದೂರಿನ ಆಧಾರದ ಮೇಲೆ ಬೆಳ್ಳಂದೂರು ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಕಾಮಗಾರಿ ವೇಳೆ ಕಲ್ಲುಬಂಡೆಗಳು ಸಿಕ್ಕಾಗ ಅವುಗಳನ್ನು ತೆರವುಗೊಳಿಸಲು ಕಾನೂನುಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಬಳಸುವಂತೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಸ್ಫೋಟಕ ವಸ್ತುಗಳನ್ನು ಹೇಗೆ ಸಂಗ್ರಹಿಸಲಾಗಿತ್ತು, ಅವುಗಳನ್ನು ಬಳಸಲು ಅನುಮತಿ ಇತ್ತೇ ಹಾಗೂ ನಿಜವಾಗಿಯೂ ಬ್ಲಾಸ್ಟಿಂಗ್ ನಡೆಸಲಾಗುತ್ತಿತ್ತೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಸದ್ಯ ಜಿಲೆಟಿನ್ ಸಂಗ್ರಹ ಮತ್ತು ಅಕ್ರಮ ಬ್ಲಾಸ್ಟಿಂಗ್ಗೆ ಸಂಬಂಧಿಸಿದ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

