ಬಿಹಾರದ ಲಖಿಸರಾಯ್ ಜಿಲ್ಲೆಯ ಅಶೋಕ್ ಧಾಮ್ ದೇವಸ್ಥಾನದಲ್ಲಿ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದ ಪರಿಣಾಮ ಭಕ್ತರಲ್ಲಿ ಆತಂಕ ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 7 ಭಕ್ತರು ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸೋಮವಾರ ಬೆಳಗ್ಗೆ ಸುಮಾರು 6.45ರ ವೇಳೆಗೆ ಈ ಘಟನೆ ನಡೆದಿದೆ. ಪವಿತ್ರ ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶಿವನ ದರ್ಶನಕ್ಕಾಗಿ ದೇವಸ್ಥಾನಕ್ಕೆ ಆಗಮಿಸಿದ್ದರು.
ಈ ವೇಳೆ ವಿದ್ಯುತ್ ತಂತಿ ಏಕಾಏಕಿ ತುಂಡಾಗಿ ಬಿದ್ದಿದ್ದು, ಇದರಿಂದ ಭಕ್ತರಲ್ಲಿ ಭೀತಿ ಉಂಟಾಗಿದೆ. ಆತಂಕಗೊಂಡ ಜನರು ಏಕಾಏಕಿ ಓಡಲು ಆರಂಭಿಸಿದ ಪರಿಣಾಮ ದೇವಸ್ಥಾನದ ಆವರಣದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಕಾಲ್ತುಳಿತದಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಲಖಿಸರಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ 7 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದ್ದರೂ, ಲಖಿಸರಾಯ್ ಜಿಲ್ಲಾಡಳಿತವು ಈವರೆಗೆ ಸಾವಿನ ಸಂಖ್ಯೆಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಘಟನೆಯ ಸಂಪೂರ್ಣ ವಿವರಗಳು ಹಾಗೂ ಕಾಲ್ತುಳಿತಕ್ಕೆ ನಿಖರ ಕಾರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

