ಬೆಂಗಳೂರು: ರಾಜ್ಯದಲ್ಲಿ ಬೋಗಸ್ ರೇಷನ್ ಕಾರ್ಡ್ ಪತ್ತೆ ಮತ್ತು ಪಡಿತರ ಸೋರಿಕೆ ತಡೆ ಉದ್ದೇಶದಿಂದ ಪಡಿತರ ಚೀಟಿಗೆ ಆಧಾರ್ ದೃಢೀಕರಣ(ಇ-ಕೆವೈಸಿ) ಮಾಡಿಸಲು ಆಹಾರ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ಆರು ತಿಂಗಳಿನಿಂದ ಪಡಿತರ ಪಡೆದ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ನಿರ್ಧರಿಸಿದೆ. ಅಂದಾಜು ಲಕ್ಷಕ್ಕೂ ಅಧಿಕ ಮಂದಿ ಪಡಿತರ ಚೀಟಿದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಪಡಿತರ ಪಡೆದುಕೊಳ್ಳುತ್ತಿಲ್ಲ. ಇ-ಕೆವೈಸಿ ಮಾಡಿಸುವ ಸಂದರ್ಭದಲ್ಲಿ ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳದ ಕಾರ್ಡ್ ಗಳನ್ನು ಗುರುತಿಸಿ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲು ಆಹಾರ ಇಲಾಖೆ ಮುಂದಾಗಿದೆ.
ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಅಂತ್ಯೋದಯ ಕಾರ್ಡ್ ಸದಸ್ಯರು, ಬಿಪಿಎಲ್ ಫಲಾನುಭವಿಗಳು ಸೆಪ್ಟೆಂಬರ್ 30ರೊಳಗೆ ಇ- ಕೆವೈಸಿ ಮಾಡಿಸುವಂತೆ ಆಹಾರ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಕೆಲವರು ಮೃತಪಟ್ಟವರ ಹೆಸರಿನಲ್ಲಿಯೂ ಪಡಿತರ ಪಡೆಯುತ್ತಿರುವ ಆರೋಪಗಳಿದ್ದು, ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯ ಪ್ರಕಾರ ಮತ್ತು ಸುಪ್ರೀಂಕೋರ್ಟ್ ಆದೇಶದ ಅನ್ವಯ ಕಾರ್ಡ್ ನಲ್ಲಿರುವ ಪ್ರತಿಯೊಬ್ಬರೂ ಆಧಾರ್ ಇ-ಕೆವೈಸಿ ಮಾಡಿಸಿಕೊಳ್ಳಬೇಕೆಂದು ಹೇಳಲಾಗಿದೆ. ಪಡಿತರ ಚೀಟಿಯಲ್ಲಿರುವ ಸದಸ್ಯರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಆಧಾರ್ ದೃಢೀಕರಣ ಮಾಡಿಸಬೇಕು ಎಂದು ಹೇಳಲಾಗಿದೆ.

