ನವದೆಹಲಿ: ಅಪಘಾತದಲ್ಲಿ ಪೋಷಕರು ಮೃತಪಟ್ಟ ಸಂದರ್ಭದಲ್ಲಿ ಅವರ ವಯಸ್ಕ, ವಿವಾಹಿತ ಮತ್ತು ಉದ್ಯೋಗಸ್ಥ ಮಕ್ಕಳು ಕೂಡ ವಿಮೆ ಪರಿಹಾರ ಪಡೆಯಲು ಅರ್ಹರು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅವಲಂಬನೆಯ ಪ್ರಮಾಣಕ್ಕೆ ಅನುಗುಣವಾಗಿ ಈ ಮಕ್ಕಳು ಕೂಡ ಪರಿಹಾರಕ್ಕಾಗಿ ಕಾನೂನು ಬದ್ಧವಾಗಿ ಅರ್ಹರಾಗಿರುತ್ತಾರೆ ಎಂದು ನ್ಯಾಯಮೂರ್ತಿಗಳಾದ ಎನ್. ಕೋಟೀಶ್ವರ್ ಸಿಂಗ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠ ತೀರ್ಪು ನೀಡಿದೆ. ಕಾನೂನುಬದ್ಧ ಪ್ರತಿನಿಧಿ ಎಂಬುದನ್ನು ಮೋಟಾರ್ ವಾಹನ ಕಾಯ್ದೆಯಲ್ಲಿ ವ್ಯಾಖ್ಯಾನಿಸಿಲ್ಲವಾದರೂ ಮೃತ ವ್ಯಕ್ತಿಯ ಆಸ್ತಿಯನ್ನು ಕಾನೂನು ಬದ್ಧವಾಗಿ ಪ್ರತಿನಿಧಿಸುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ನ್ಯಾಯಪೀಠ ಹೇಳಿದೆ.
ಮಾಸಿಕ 9,000 ರೂ. ವೇತನ ಪಡೆಯುತ್ತಿದ್ದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ 48 ವರ್ಷದ ವ್ಯಕ್ತಿಯೊಬ್ಬರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಪತ್ನಿ ಮತ್ತು ಮೂವರು ಮಕ್ಕಳು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣದಲ್ಲಿ ಆರ್ಥಿಕವಾಗಿ ಮೃತರನ್ನು ಅವಲಂಬಿಸಿದ್ದವರು ಮಾತ್ರವೇ ಅಲ್ಲ, ಬದಲಾಗಿ ಅವರ ಆಸ್ತಿಯಲ್ಲಿ ಪಾಲು ಪಡೆಯುವ ಹಾಗೂ ಕಾನೂನು ಬದ್ಧವಾಗಿ ಅವರನ್ನು ಪ್ರತಿನಿಧಿಸುವವರು ಕೂಡ ಪರಿಹಾರಕ್ಕೆ ಅರ್ಹರು ಎಂದು ನ್ಯಾಯ ಪೀಠ ವ್ಯಾಖ್ಯಾನಿಸಿದೆ.
ಅವಲಂಬಿತರಿಗೆ ಮೋಟಾರ್ ಅಪಘಾತ ಪರಿಹಾರ ನ್ಯಾಯ ಮಂಡಳಿ 8.44 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಈ ಮೊತ್ತವನ್ನು 11 ಲಕ್ಷ ರೂ.ಗೆ ಹೆಚ್ಚಳ ಮಾಡಿ ತೆಲಂಗಾಣ ಹೈಕೋರ್ಟ್ ಆದೇಶಿಸಿತ್ತು. ಅಲ್ಲದೆ ನ್ಯಾಯ ಮಂಡಳಿಯ ತೀರ್ಪು ನೀಡಿದ ದಿನದಿಂದ ಹಣ ಪಾವತಿ ಆಗುವ ದಿನದವರೆಗೆ ಶೇ. 7.5ರಷ್ಟು ಬಡ್ಡಿ ಕೂಡ ಪಾವತಿಸಬೇಕೆಂದು ಹೇಳಲಾಗಿತ್ತು.
ಅವಲಂಬಿತರು ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಒಟ್ಟು ಪರಿಹಾರ ಮೊತ್ತವನ್ನು 12.47 ಲಕ್ಷ ರೂ.ಗೆ ಹೆಚ್ಚಳ ಮಾಡಿದ್ದು, ವಿವಾಹಿತ, ವಯಸ್ಕ, ಉದ್ಯೋಗಸ್ಥ ಮಕ್ಕಳು ಕೂಡ ಪರಿಹಾರಕ್ಕೆ ಅರ್ಹರು ಎಂದು ಹೇಳಿದೆ.

