ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಲ್ಲಿ ಮಾತ್ರವಲ್ಲದೆ ಯುವಜನರಲ್ಲೂ ಒಂದು ಪ್ರಮುಖ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅದೇನೆಂದರೆ, ತಮಗೆ ಅರಿವಿಲ್ಲದಂತೆ ಅಥವಾ ನಿಯಂತ್ರಣವಿಲ್ಲದೆ ಮೂತ್ರ ಸೋರಿಕೆಯಾಗುವುದು. ಅನೇಕ ಜನರು ಮುಜುಗರದಿಂದಾಗಿ ಈ ವಿಷಯವನ್ನು ಹೊರಗಡೆ ಹೇಳಿಕೊಳ್ಳುವುದಿಲ್ಲ ಮತ್ತು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ. ಆದರೆ ಈ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯದಿದ್ದರೆ, ಮುಂದಿನ ದಿನಗಳಲ್ಲಿ ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು.
ಮೂತ್ರ ನಿಯಂತ್ರಣ ತಪ್ಪಲು ಕಾರಣಗಳೇನು
ದೈನಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ದೇಹದಲ್ಲಿನ ಕೆಲವು ಬದಲಾವಣೆಗಳು ಈ ಸಮಸ್ಯೆಗೆ ಮುಖ್ಯ ಕಾರಣವಾಗಿವೆ.
ಮುಖ್ಯವಾಗಿ ಕೆಮ್ಮಿದಾಗ, ಸೀನಿದಾಗ, ನಕ್ಕಾಗ ಅಥವಾ ಭಾರವಾದ ವಸ್ತುಗಳನ್ನು ಎತ್ತಿದಾಗ ಸಣ್ಣ ಪ್ರಮಾಣದಲ್ಲಿ ಮೂತ್ರ ಸೋರಿಕೆಯಾಗುವುದು ಒಂದು ರೀತಿಯಾದರೆ, ಇದ್ದಕ್ಕಿದ್ದಂತೆ ಮೂತ್ರ ವಿಸರ್ಜನೆಯ ತುರ್ತು ಭಾವನೆ ಉಂಟಾಗಿ ನಿಯಂತ್ರಿಸಲು ಸಾಧ್ಯವಾಗದಿರುವುದು ಇನ್ನೊಂದು ರೀತಿ.
ಮಹಿಳೆಯರಲ್ಲಿ ಗರ್ಭಧಾರಣೆ, ಹೆರಿಗೆಯ ನಂತರದ ದೈಹಿಕ ಬದಲಾವಣೆಗಳು ಅಥವಾ ಹಾರ್ಮೋನ್ ಏರುಪೇರುಗಳಿಂದ ಸೊಂಟದ ಭಾಗದ ಸ್ನಾಯುಗಳು ದುರ್ಬಲಗೊಂಡು ಈ ಸಮಸ್ಯೆ ಎದುರಾಗುತ್ತದೆ. ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಗ್ರಂಥಿ ಊತ ಅಥವಾ ಶಸ್ತ್ರಚಿಕಿತ್ಸೆಯ ನಂತರ ಈ ರೀತಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರೊಂದಿಗೆ ಅತಿಯಾದ ಬೊಜ್ಜು, ಮಧುಮೇಹ, ನರಮಂಡಲದ ತೊಂದರೆಗಳು ಮತ್ತು ತೀವ್ರ ರೀತಿಯ ಮಲಬದ್ಧತೆ ಕೂಡ ಈ ಸಮಸ್ಯೆಯನ್ನು ಹೆಚ್ಚಿಸುತ್ತವೆ.
ಪರಿಹಾರ ಮತ್ತು ತಡೆಗಟ್ಟುವ ಮಾರ್ಗಗಳು
ಈ ತೊಂದರೆಯಿಂದ ಮುಕ್ತಿ ಪಡೆಯಲು ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ.
ಮೊದಲನೆಯದಾಗಿ, ಸೊಂಟ ಮತ್ತು ಶ್ರೋಣಿ ಭಾಗದ ಸ್ನಾಯುಗಳನ್ನು ಬಲಪಡಿಸುವ ಸರಳ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು. ತೂಕ ಹೆಚ್ಚಿದ್ದರೆ ಅದನ್ನು ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳುವುದು ಸೂಕ್ತ. ಅತಿಯಾದ ಕಾಫಿ, ಟೀ, ಮದ್ಯಪಾನ ಮತ್ತು ತಂಪು ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವುದರಿಂದ ಮೂತ್ರಕೋಶದ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ದಿನಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯಬೇಕು, ಆದರೆ ರಾತ್ರಿ ಮಲಗುವ ಮುನ್ನ ಅತಿಯಾಗಿ ನೀರು ಕುಡಿಯುವುದನ್ನು ತಪ್ಪಿಸುವುದು ಒಳ್ಳೆಯದು. ಧೂಮಪಾನದ ಅಭ್ಯಾಸವಿದ್ದರೆ ತಕ್ಷಣವೇ ಅದನ್ನು ಬಿಡುವುದು ಆರೋಗ್ಯಕ್ಕೆ ಕ್ಷೇಮ.
ಸಮಸ್ಯೆ ತೀವ್ರವಾಗಿದ್ದರೆ ತಡಮಾಡದೆ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಅಗತ್ಯ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಹತೋಟಿಗೆ ತರಬಹುದು.

