ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶನಿವಾರ ಕೆಂಪುಕೋಟೆಯ ಆವರಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದರು. ಕಳೆದ 12 ವರ್ಷಗಳಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಅವರು, 140 ಕೋಟಿ ಭಾರತೀಯರ ಸಂಕಲ್ಪ ಮತ್ತು ಸಾಮರ್ಥ್ಯದಿಂದ ದೇಶದ ಪ್ರಗತಿ ಸಾಧ್ಯವಾಗಿದೆ ಎಂದು ಹೇಳಿದರು.
ಕಳೆದ 12 ವರ್ಷಗಳಲ್ಲಿ ಸಾಧಿಸಿರುವ ಬೆಳವಣಿಗೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “ಕಳೆದ 12 ವರ್ಷಗಳಲ್ಲಿ ರಕ್ಷಣಾ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗದ ಉತ್ಪಾದನೆ ಐದು ಪಟ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆ ಏಳು ಪಟ್ಟು ಹೆಚ್ಚಾಗಿದೆ. ಮೊಬೈಲ್ ಫೋನ್ ಉತ್ಪಾದನೆ ಶೇ.33ರಷ್ಟು ಹೆಚ್ಚಾಗಿದೆ. ಡಿಜಿಟಲ್ ವಹಿವಾಟುಗಳು ಶೇ.100ರಷ್ಟು ಹೆಚ್ಚಾಗಿವೆ” ಎಂದು ಹೇಳಿದರು.
ಅವರು ಮತ್ತಷ್ಟು ಮಾತನಾಡಿ, “ಒಂದು ರಾಷ್ಟ್ರವು ತನ್ನ ಕನಸುಗಳು, ಸಂಕಲ್ಪ ಮತ್ತು ತನ್ನೊಳಗಿನ ಶಕ್ತಿಯಿಂದ ಮುನ್ನಡೆಯುವಾಗ ಅದು ಮಹತ್ವದ ರಾಷ್ಟ್ರವಾಗುತ್ತದೆ ಮತ್ತು ತನ್ನ ಗುರಿಗಳನ್ನು ಸಾಧಿಸುತ್ತದೆ. ಇನ್ನು ಮುಂದೆ ಸಣ್ಣ ಕನಸುಗಳು ಸಾಕಾಗುವುದಿಲ್ಲ. ನಾವು ದೊಡ್ಡ ಕನಸುಗಳನ್ನು ಕಾಣಬೇಕು. ದೊಡ್ಡ ಕನಸುಗಳು ನಮ್ಮ ಚಿಂತನೆಗಳನ್ನು ವಿಸ್ತರಿಸುತ್ತವೆ ಮತ್ತು ನಮ್ಮ ದೃಷ್ಟಿಕೋನದ ವ್ಯಾಪ್ತಿಯನ್ನು ಹೆಚ್ಚಿಸುತ್ತವೆ. ನಮ್ಮ ಸಂಕಲ್ಪ ದೃಢವಾಗಿರಬೇಕು. ನಮ್ಮ ಸಂಕಲ್ಪ ದೃಢವಾಗಿದ್ದರೆ, ಕಷ್ಟಗಳು ಮತ್ತು ವಿಪತ್ತುಗಳ ನಡುವೆಯೂ ಮುನ್ನಡೆಯುವ ದಾರಿಯನ್ನು ಕಂಡುಕೊಳ್ಳುವ ಸಾಮರ್ಥ್ಯ ಸಹಜವಾಗಿಯೇ ಮೂಡುತ್ತದೆ” ಎಂದು ಹೇಳಿದರು.
ಭಾರತವು ಶನಿವಾರ, ಆಗಸ್ಟ್ 15ರಂದು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದೆ. ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಮಟ್ಟದ ಸ್ವಾತಂತ್ರ್ಯೋತ್ಸವದ ನೇತೃತ್ವ ವಹಿಸಿದ್ದಾರೆ. ಪ್ರಧಾನಿ ಮೋದಿ ಅವರು ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಇದು ಐತಿಹಾಸಿಕ ಕೆಂಪುಕೋಟೆಯ ಆವರಣದಿಂದ ಅವರು ಸತತ 13ನೇ ಬಾರಿಗೆ ಮಾಡುತ್ತಿರುವ ಸ್ವಾತಂತ್ರ್ಯ ದಿನದ ಭಾಷಣವಾಗಿದೆ.
ಭಾಷಣಕ್ಕೂ ಮುನ್ನ ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಕೊಡುಗೆ ನೀಡಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಸಹ ಅವರು ಸ್ಮರಿಸಿದರು.
ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದ 79 ವರ್ಷಗಳನ್ನು ಈ ಬಾರಿಯ ಆಚರಣೆ ಗುರುತಿಸುತ್ತದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವತ್ತ ದೇಶ ಸಾಗುತ್ತಿರುವ ಪಯಣದ ಮೇಲೆ ಈ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ವಿಶೇಷ ಗಮನ ಹರಿಸಲಾಗಿದೆ. ಇದೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಪ್ರಸ್ತುತಪಡಿಸಲಾಗುತ್ತಿದೆ.
ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ವೀಕ್ಷಿಸಲು ವಿವಿಧ ಕ್ಷೇತ್ರಗಳ ಸುಮಾರು 5,000 ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಯುವ ಆವಿಷ್ಕಾರಕರು, ‘ಮೈ ಭಾರತ್’ ಸ್ವಯಂಸೇವಕರು, ಅತ್ಯುತ್ತಮ ಇಂಟರ್ನ್ಗಳು, ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು, ಸ್ವಚ್ಛತಾ ಕಾರ್ಮಿಕರು, ಬೀದಿ ವ್ಯಾಪಾರಿಗಳು ಮತ್ತು ಸಾಂಪ್ರದಾಯಿಕ ಕರಕುಶಲ ಕ್ಷೇತ್ರವನ್ನು ಪ್ರತಿನಿಧಿಸುವ ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಅತಿಥಿಗಳಲ್ಲಿ ಸೇರಿದ್ದಾರೆ.
ಈ ಬಾರಿ ತಂತ್ರಜ್ಞಾನಕ್ಕೂ ಪ್ರಮುಖ ಪಾತ್ರ ನೀಡಲಾಗಿದೆ. ಪ್ರಧಾನಿ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣವನ್ನು ಭಾಷಿಣಿ ಸೇರಿದಂತೆ ಡಿಜಿಟಲ್ ತಂತ್ರಜ್ಞಾನಗಳ ಮೂಲಕ 22 ಭಾರತೀಯ ಭಾಷೆಗಳಲ್ಲಿ ರಿಯಲ್ಟೈಮ್ ಎಐ ಅನುವಾದ ಮಾಡುವ ವ್ಯವಸ್ಥೆಯನ್ನು ಯೋಜಿಸಲಾಗಿದೆ.
ದೇಶಾದ್ಯಂತ ಶಾಲೆಗಳು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು, ವಸತಿ ಪ್ರದೇಶಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಧ್ವಜಾರೋಹಣ ನಡೆಯಲಿದೆ. ಇದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಅಲ್ಪಾವಧಿಯಲ್ಲೇ 50 ಲಕ್ಷ ಕುಟುಂಬಗಳು ಸೌರಶಕ್ತಿಯನ್ನು ಬಳಸಲು ನೆರವಾಗಿದೆ ಎಂದು ಹೇಳಿದರು. ಅಭಿವೃದ್ಧಿಯ ಪ್ರಯೋಜನಗಳು ಮಧ್ಯಮ ವರ್ಗ ಹಾಗೂ ಸಾಮಾನ್ಯ ಕುಟುಂಬಗಳಿಗೆ ತಲುಪುವಂತೆ ಸರ್ಕಾರ ಗಮನಹರಿಸಿದೆ ಎಂದು ಅವರು ತಿಳಿಸಿದರು.
ಮುಂದಿನ 7ರಿಂದ 8 ವರ್ಷಗಳಲ್ಲಿ ಇನ್ನೂ 5ರಿಂದ 8 ಸೆಮಿಕಂಡಕ್ಟರ್ ಘಟಕಗಳು ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸೆಮಿಕಂಡಕ್ಟರ್ ಉತ್ಪಾದನೆಯ ವಿಸ್ತರಣೆ ‘ಆತ್ಮನಿರ್ಭರ ಭಾರತ’ದತ್ತ ಸಾಗುವ ಪಯಣದ ಭಾಗವಾಗಿದ್ದು, ‘ವಿಕಸಿತ ಭಾರತ’ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿದೆ ಎಂದು ಅವರು ಹೇಳಿದರು.

