ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ಅವರ ಜಾಮೀನು ರದ್ದಾಗಿ ಮರಳಿ ಪರಪ್ಪನ ಅಗ್ರಹಾರ ಜೈಲು ಸೇರಿ ಇಂದಿಗೆ (ಆಗಸ್ಟ್ 14) ಭರ್ತಿ ಒಂದು ವರ್ಷ ಪೂರೈಸಿದೆ. ಈ ಕಷ್ಟದ ಸಮಯದಲ್ಲಿ ಒಂದೆಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜಾಲತಾಣದಲ್ಲಿ ಮನದ ನೋವನ್ನು ಹಂಚಿಕೊಂಡಿದ್ದರೆ, ಇನ್ನೊಂದೆಡೆ ಹೈಕೋರ್ಟ್ನಿಂದ ನಟ ದರ್ಶನ್ಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ.
“ನೋವು ಸಹಿಸಲು ಆಗ್ತಿಲ್ಲ…” – ವಿಜಯಲಕ್ಷ್ಮಿ ಭಾವುಕ ಪೋಸ್ಟ್
ಗಂಡ ಜೈಲು ಸೇರಿ ವರ್ಷ ಪೂರೈಸಿದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಹಾಗೂ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಆಗಲೇ ಒಂದು ವರ್ಷ ಕಳೆಯಿತು. ನೋವು ಹಾಗೇ ಉಳಿದುಬಿಟ್ಟಿದೆ, ಗಾಯ ಇನ್ನೂ ವಾಸಿಯಾಗಿಲ್ಲ. ಆ ನೋವನ್ನು ಸಹಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಅಸಲಿ ಪರಿಸ್ಥಿತಿ ಏನೆಂದು ತಿಳಿಯದೇ ಇಡೀ ಜಗತ್ತು ತಮ್ಮಿಷ್ಟ ಬಂದಂತೆ ತೀರ್ಪು ಕೊಡುತ್ತಿದೆ. ಅವರಿಗೆಲ್ಲ ಉತ್ತರ ಕೊಡುವುದನ್ನು ನಾನು ಎಂದೋ ಬಿಟ್ಟುಬಿಟ್ಟಿದ್ದೇನೆ. ಈಗ ನಾನು ಸುಮ್ಮನೆ ನಗುತ್ತಾ, ಕಾಲ ಮತ್ತು ದೇವರಿಗೆ ಎಲ್ಲವನ್ನೂ ಬಿಟ್ಟು ಸುಮ್ಮನಾಗಿದ್ದೇನೆ, ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಕಾಮಾಕ್ಯ ದೇವಿಯ ಫೋಟೋ ಶೇರ್ ಮಾಡಿದ್ದ ಅವರು, “ದೇವರಿಗೆ ಗೊತ್ತು ಅಷ್ಟೇ ಸಾಕು” ಎಂಬ ಸಾಲುಗಳನ್ನು ಬರೆದಿದ್ದರು. ಅದಕ್ಕೆ ಹಿನ್ನೆಲೆಯಾಗಿ “ಎಲ್ಲಿಗೆ ಓಡುವೆ ಓ ಮನುಜ.. ನಿನ್ನ ಕರ್ಮಗಳೆಲ್ಲ ಇಲ್ಲೇ ಕೊನೆ” ಎಂಬ ಹಾಡನ್ನು ಸೇರಿಸಿ ತಮ್ಮ ಮನದ ಬೇಸರ ತೋರ್ಪಡಿಸಿಕೊಂಡಿದ್ದರು.
ಇತ್ತ ಕೋರ್ಟ್ ವಿಚಾರಣೆಯಲ್ಲೂ ದರ್ಶನ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್ ‘ಮಾಫಿ ಸಾಕ್ಷಿ’ (ಅಪ್ರೂವರ್) ಆಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ವಿರೋಧಿಸಿ ಆಕ್ಷೇಪಣೆ ಸಲ್ಲಿಸಲು ತಮಗೂ ಅವಕಾಶ ನೀಡಬೇಕೆಂದು ದರ್ಶನ್ ಹಾಗೂ ಸಹ-ಆರೋಪಿಗಳು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆ ಮನವಿಯನ್ನು ತಿರಸ್ಕರಿಸಿತ್ತು.
ಕೇಸ್ನ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ದರ್ಶನ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಸಿಆರ್ಪಿಸಿ (CrPC) ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣದ ಯಾವುದೇ ಒಬ್ಬ ಆರೋಪಿ ‘ಮಾಫಿ ಸಾಕ್ಷಿ’ಯಾಗಲು ಬಯಸಿ ಅರ್ಜಿ ಸಲ್ಲಿಸಿದಾಗ, ಆ ಅರ್ಜಿಯನ್ನು ಕೋರ್ಟ್ ಪರಿಗಣಿಸುವ ಹಂತದಲ್ಲಿ ಅದರ ವಿರುದ್ಧ ವಾದ ಮಂಡಿಸುವ ಅಥವಾ ಆಕ್ಷೇಪಿಸುವ ಯಾವುದೇ ಹಕ್ಕು ಇತರೆ ಸಹ-ಆರೋಪಿಗಳಿಗೆ ಇರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದರಿಂದಾಗಿ ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ದರ್ಶನ್ ಪರ ವಕೀಲರು ನಡೆಸಿದ್ದ ಯತ್ನಕ್ಕೆ ಹಿನ್ನಡೆಯಾದಂತಾಗಿದೆ.

