ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಕೋರಿ ಕನ್ನಡಪರ ಸಂಘಟನೆ ಮುಖಂಡರು ಹಾಗೂ ರೈತ ಮುಖಂಡರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿಗೆ ಪ್ರತಿದಿನ 12,000 ಕ್ಯೂಸೆಕ್ ನೀರಿನಂತೆ 15 ದಿನಗಳ ಕಾಲ ನೀರು ಹರಿಸುವಂತೆ CWRC ಹಾಗೂ CWMA ಆದೇಶ ನೀಡಿರುವ ಬೆನ್ನಲ್ಲೇ ಕರ್ನಾಟಕಕ್ಕೆ ಸಂಕಷ್ಟ ಎದುರಾಗಿದ್ದು, ಇಲ್ಲಿ ಬರ ಪರಿಸ್ಥಿತಿಯಿಂದ ಕುಡಿಯಲು ನೀರಲ್ಲದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ರಾಜಧಾನಿ ಬೆಂಗಳೂರು ಹಾಗೂ ಬೆಂಗಳೂರು ಹೊರವಲಯದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ.
ಈ ನಡುವೆ ಕನ್ನಡಪರ ಸಂಘಟನೆ ಮುಖಂಡರು ಹಾಗೂ ರೈತ ಮುಖಂಡರು ಕುಡಿಯುವ ನೀರಿಗೂ ರಾಜ್ಯದಲ್ಲಿ ಸಂಕಷ್ಟವಿರುವ ಸಂದರ್ಭದಲ್ಲಿ ತಮಿಲುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಹಾಗೂ ರಾಜ್ಯದ ರೈತರ, ಜನರ ಹಿತ ಕಾಯುವಂತೆ ಒತ್ತಾಯಿಸಿಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಮಾಡಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ಕನ್ನಡಪರ ಸಂಘಟನೆ ಮುಖಂಡರಾದ ಸಾ.ರಾ.ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶಿವರಾಮೇಗೌಡ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು.
ಈ ವೇಳೆ ಮಳೆ ಕೊರತೆಯಿಂದಾಗಿ ನಮಗೇ ಕುಡಿಯಲು ನೀರಿಲ್ಲ. ರೈತರ ಬೆಳೆಗಳಿಗೆ ನೀರಲ್ಲದೇ ಸಂಕಷ್ಟ ಎದುರಾಗಿದೆ. ಕೆ.ಆರ್.ಎಸ್.ಡ್ಯಾಂ, ಹಾರಂಗಿ ಜಲಾಶಯಗಳು ಇನ್ನೂ ಭರ್ತಿಯಾಗಿಲ್ಲ. ನೀರಿನ ಒಳ ಹರಿವು ಕಡಿಮೆಯಾಗಿದೆ. ಇಂತಹ ಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ರಾಜ್ಯ ಸರ್ಕಾರ ರಜ್ಯದ ರೈತರ, ಜನರ ಹಿತ ಕಾಯಬೇಕು. ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ಹಲವು ಬೇಡಿಕೆಗಳನ್ನು ಮುಂದಿಟ್ಟರು.
ಕನ್ನಡಪರ ಹೋರಾಟಗಾರರ ಮನವಿಗೆ ಸ್ಪಂದಿಸಿದ ಸಿಎಂ ಡಿ.ಕೆ.ಶಿವಕುಮಾರ್, ರಾಜ್ಯದ ರೈತರ ಹಿತಕಾಯಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ಕರ್ನಾಟಕ ಬಂದ್ ನಿಂದಾಗಿ ಜನರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ವ್ಯಾಪಾರ-ವಹಿವಾಟು ಸ್ಥಗಿತಗೊಂಡು ರಾಜ್ಯದ ಆರ್ಥಿಕತೆಗೆ ಹೊಡೆತ ಬೀಳುತ್ತದೆ. ಹಾಗಾಗಿ ಬಂದ್ ಕೈಬಿಡುವಂತೆ ಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಈ ವೇಳೆ ಕನ್ನಡಪರ ಸಂಘಟನೆ ಮುಖಂಡರು ಹಾಗೂ ರೈತ ಮುಖಂಡರು ತಮ್ಮ ಬೇಡಿಕೆಗಳನ್ನು ಈಡೇರಿಸಿ ರೈತರ ಹಾಗೂ ರಾಜ್ಯದ ಹಿತ ಕಾಯುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳುವುದಾದರೆ ಬಂದ್ ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ.
ಕನ್ನಡಪರ ಸಂಘಟನೆ ಮುಖಂಡರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಕಾವೇರಿ ನದಿ ನೀರು ವಿಚಾರವಾಗಿ ಇಂದು ಕನ್ನಡಪರ ಸಂಘನೆಗಳು, ರೈತ ಮುಖಂಡರು ನಮ್ಮನ್ನು ಭೇಟಿಯಾಗಿದ್ದು, ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ರಾಜ್ಯದ ರೈತರ ಹಿತ ಕಾಯುವಂತೆ ಮನವಿ ಮಾಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಮೇಕೆದಾಟು ಯೋಜನೆ ಶೀಘ್ರವೇ ಪ್ರಾರಂಭ ಮಾಡುವುದಾಗಿ ತಿಳಿಸಿದ್ದೇವೆ. ರಾಜ್ಯದ ಜನರ ಹಿತದೃಷ್ಟಿಯಿಂದ ಬಂದ್ ಕೈಬಿಡುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಸಂಘಟನೆಗಳು ಒಪ್ಪಿವೆ. ಕರ್ನಾಟಕ ಬಂದ್ ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ. ಹಾಗಾಗಿ ಕನ್ನಡಪರ ಸಂಗಹ್ಟನೆಗಳಿಗೆ, ರೈತ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

