ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಭರ್ಜರಿ ಗುಡ್‌ನ್ಯೂಸ್. ಇನ್ಮುಂದೆ ಸಿಲಿಂಡರ್ ಬುಕ್ ಮಾಡಿದ 3ರಿಂದ 4 ಗಂಟೆಗಳಲ್ಲೇ ಮನೆ ಬಾಗಿಲಿಗೆ ಡೆಲಿವರಿ ಆಗಲಿದೆ. ಈ ನಿಟ್ಟಿನಲ್ಲಿ ಇಂಡಿಯನ್ ಆಯಿಲ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಂಡೇನ್ ವತಿಯಿಂದ ಎಕ್ಸ್‌ಪ್ರೆಸ್ ಡೆಲಿವರಿ ಸೇವೆಯನ್ನು ಆರಂಭಿಸಲಾಗಿದೆ.
ಸದ್ಯ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ಬಳಿಕ ಕೆಲವೊಮ್ಮೆ ಡೆಲಿವರಿಗೆ ಒಂದು ವಾರದವರೆಗೂ ಸಮಯ ಬೇಕಾಗುತ್ತದೆ. ಕೆಲ ಸಂದರ್ಭಗಳಲ್ಲಿ 2–3 ದಿನಗಳಲ್ಲೇ ಸಿಲಿಂಡರ್ ಮನೆಗೆ ತಲುಪುತ್ತದೆ. ಆದರೆ ಹೊಸ ಎಕ್ಸ್‌ಪ್ರೆಸ್ ಡೆಲಿವರಿ ಸೇವೆಯಿಂದ ದಿನಗಟ್ಟಲೆ ಕಾಯಬೇಕಾದ ಅಗತ್ಯ ಇರುವುದಿಲ್ಲ. ಕೆಲವೇ ಗಂಟೆಗಳಲ್ಲಿ ಸಿಲಿಂಡರ್ ಮನೆಗೆ ತಲುಪಲಿದೆ.
ಎಕ್ಸ್‌ಪ್ರೆಸ್ ಡೆಲಿವರಿ ಸೇವೆ ಆರಂಭ
ಈ ಎಕ್ಸ್‌ಪ್ರೆಸ್ ಡೆಲಿವರಿ ಸೇವೆ 10 ಕೆ.ಜಿ. ಕಾಂಪೋಸಿಟ್ ಗ್ಯಾಸ್ ಸಿಲಿಂಡರ್‌ಗೆ ಅನ್ವಯಿಸುತ್ತದೆ. ಸಾಮಾನ್ಯವಾಗಿ ಬಳಸುವ 14.2 ಕೆ.ಜಿ. ಸಿಲಿಂಡರ್ ಬದಲಿಗೆ ಇಂಡೇನ್ 10 ಕೆ.ಜಿ. ಕಾಂಪೋಸಿಟ್ ಸಿಲಿಂಡರ್ ಪರಿಚಯಿಸಿದೆ.ಈ ಸಿಲಿಂಡರ್ ಅನ್ನು ಬುಕ್ ಮಾಡಿದ 4 ಗಂಟೆಗಳೊಳಗೆ ಪಡೆಯಬಹುದು. ‘Indane XtraLight Now’ ಹೆಸರಿನಲ್ಲಿ ಈ ಸೂಪರ್ ಫಾಸ್ಟ್ ಡೆಲಿವರಿ ಸೇವೆಯನ್ನು ನೀಡಲಾಗುತ್ತಿದೆ.
ಉದಾಹರಣೆಗೆ, ಬೆಳಗ್ಗೆ 7 ಗಂಟೆಗೆ ಸಿಲಿಂಡರ್ ಬುಕ್ ಮಾಡಿದರೆ ಬೆಳಗ್ಗೆ 11 ಗಂಟೆಯೊಳಗೆ ಮನೆಗೆ ತಲುಪುವ ವ್ಯವಸ್ಥೆ ಇದೆ.ಸಿಲಿಂಡರ್ ಅನ್ನು IndianOil ONE ಆ್ಯಪ್, Indian Oil ಗ್ರಾಹಕ ವೆಬ್‌ಸೈಟ್ ಅಥವಾ WhatsApp ಸಂಖ್ಯೆ 7588888824 ಮೂಲಕ ಬುಕ್ ಮಾಡಬಹುದು. ಹೊಸ 10 ಕೆ.ಜಿ. ಕಾಂಪೋಸಿಟ್ ಸಿಲಿಂಡರ್ ಪಡೆಯುವ ಪ್ರಕ್ರಿಯೆಯೂ ಸರಳವಾಗಿದ್ದು, ಹೆಚ್ಚಿನ ದಾಖಲೆಗಳ ಅಗತ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕಾಂಪೋಸಿಟ್ ಸಿಲಿಂಡರ್‌ನ ವಿಶೇಷತೆಗಳೇನು?
ಕಾಂಪೋಸಿಟ್ ಸಿಲಿಂಡರ್ ಸಾಮಾನ್ಯ 14.2 ಕೆ.ಜಿ. ಸಿಲಿಂಡರ್‌ಗಿಂತ ತೂಕದಲ್ಲಿ ಕಡಿಮೆ ಇರುತ್ತದೆ. ಹೀಗಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯಬಹುದು. ಮಹಿಳೆಯರು ಹಾಗೂ ವೃದ್ಧರು ಕೂಡ ಇದನ್ನು ಸುಲಭವಾಗಿ ಎತ್ತಿ ಸಾಗಿಸಬಹುದು.ಇದರ ಮತ್ತೊಂದು ಪ್ರಮುಖ ವಿಶೇಷತೆ ಎಂದರೆ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎಂಬುದು ಹೊರಗಿನಿಂದಲೇ ಕಾಣುತ್ತದೆ. ಇದರಿಂದ ಗ್ಯಾಸ್ ಯಾವಾಗ ಖಾಲಿಯಾಗಲಿದೆ ಎಂಬುದನ್ನು ಮುಂಚಿತವಾಗಿ ತಿಳಿದುಕೊಂಡು ರಿಫಿಲ್ ಬುಕ್ ಮಾಡಬಹುದು.
ಈ ಸಿಲಿಂಡರ್ ಅನ್ನು ಫೈಬರ್ ಆಧಾರಿತ ವಸ್ತುಗಳಿಂದ ತಯಾರಿಸಲಾಗಿದ್ದು, ತುಕ್ಕು ಹಿಡಿಯುವುದಿಲ್ಲ. ಜೊತೆಗೆ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಸಿಲಿಂಡರ್‌ಗೆ ಸಂಬಂಧಿಸಿದ ಅಪಘಾತ ಸಂಭವಿಸಿದರೂ ಅಪಾಯದ ತೀವ್ರತೆಯನ್ನು ಕಡಿಮೆ ಮಾಡುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟಿನಲ್ಲಿ, ವೇಗದ ಡೆಲಿವರಿ ಜೊತೆಗೆ ಕಡಿಮೆ ತೂಕ, ಗ್ಯಾಸ್ ಮಟ್ಟ ಗೋಚರಿಸುವಿಕೆ ಮತ್ತು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳಿಂದ ಈ ಕಾಂಪೋಸಿಟ್ ಸಿಲಿಂಡರ್ ಗ್ರಾಹಕರಿಗೆ ಅನುಕೂಲಕರವಾಗಲಿದೆ.

