ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರವು ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಜ್ಯದ ಅಧಿಕೃತ ಗೀತೆಯಾದ ‘ತಮಿಳ್ ತಾಯಿ ವಾಳ್ತು’ವನ್ನು ಕಡ್ಡಾಯವಾಗಿ ಮೊದಲ ಹಾಡಾಗಿ ಹಾಡುವಂತೆ ಆದೇಶಿಸಿದೆ.
ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ನಡೆಯುವ ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲೇ ‘ತಮಿಳ್ ತಾಯಿ ವಾಳ್ತು’ ಹಾಡಬೇಕು ಎಂದು ಸರ್ಕಾರದ ನಿರ್ದೇಶನ ತಿಳಿಸಿದೆ.
ಸೋಮವಾರ ತಮಿಳುನಾಡು ವಿಧಾನಸಭೆಯಲ್ಲಿ ಈ ಕುರಿತು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಆಡಳಿತಾರೂಢ ಟಿವಿಕೆ ಸರ್ಕಾರದ ಈ ನಿರ್ಣಯಕ್ಕೆ ಪ್ರತಿಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, ತಮಿಳು ಭಾಷೆ ರಾಜ್ಯದ ಜನರ ಅಸ್ಮಿತೆ ಮತ್ತು ಭಾವನೆಗಳೊಂದಿಗೆ ಆಳವಾಗಿ ಬೆಸೆದುಕೊಂಡಿದೆ ಎಂದು ಹೇಳಿದರು. “ತಮಿಳು ಕೇವಲ ಒಂದು ಭಾಷೆಯಲ್ಲ; ಅದು ನಮ್ಮ ಜೀವನ ಮತ್ತು ಭಾವನೆ. ತಾಯಿಭಾಷೆ ತಾಯಿಯಷ್ಟೇ ಪವಿತ್ರ” ಎಂದು ಅವರು ಹೇಳಿದರು. ‘ತಮಿಳ್ ತಾಯಿ ವಾಳ್ತು’ಗೆ ಮೊದಲ ಆದ್ಯತೆ ನೀಡುವುದು ಭಾರತದ ಏಕತೆ ಅಥವಾ ಸಂವಿಧಾನಕ್ಕೆ ವಿರುದ್ಧವಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದರು. “ಇದು ವೈವಿಧ್ಯತೆಯಲ್ಲಿ ಏಕತೆ ಎಂಬ ಭಾರತದ ಉನ್ನತ ತತ್ವವನ್ನು ಪ್ರತಿಬಿಂಬಿಸುತ್ತದೆ. ‘ತಮಿಳ್ ತಾಯಿ ವಾಳ್ತು’ವನ್ನು ಮೊದಲು ಹಾಡುವ ವಿಚಾರವನ್ನು ರಾಜಕೀಯ ವಿವಾದವನ್ನಾಗಿ ಮಾಡುವ ಅಗತ್ಯವಿಲ್ಲ” ಎಂದು ಅವರು ಹೇಳಿದರು.

