ನವದೆಹಲಿ: ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಅವರ ಮೇಲಿನ ಪೊಲೀಸ್ ಲಾಠಿಚಾರ್ಜ್ ಘಟನೆ ಕುರಿತು ಸಂಸತ್ತಿನಲ್ಲಿ ಸುದೀರ್ಘ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ತಿಳಿಸಿದ್ದಾರೆ. ಆದರೆ, ವಿರೋಧ ಪಕ್ಷಗಳು ಈ ಕುರಿತು ಲೋಕಸಭಾ ಸ್ಪೀಕರ್‌ಗೆ ಅಧಿಕೃತವಾಗಿ ಪತ್ರ ನೀಡಬೇಕು ಎಂಬ ಷರತ್ತನ್ನು ಅವರು ವಿಧಿಸಿದ್ದಾರೆ.
ಸಚಿವರ ಈ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನಮಗೆ ಅಮಿತ್ ಶಾ ಅವರ ಉಪನ್ಯಾಸ ಕೇಳಲು ಆಸಕ್ತಿಯಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ನೀಡಿದ ಷರತ್ತು ಏನು?
ಸಂಸತ್ತಿನ ಸಂಕೀರ್ಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ವಿದ್ಯಾರ್ಥಿ ಪ್ರತಿಭಟನೆ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ, ಆದ್ದರಿಂದ ವಿರೋಧ ಪಕ್ಷಗಳು ಸದನ ಸುಗಮವಾಗಿ ನಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.
“ವಿರೋಧ ಪಕ್ಷಗಳು ಬುಧವಾರ ಮಧ್ಯಾಹ್ನ 2ಗಂಟೆಯೊಳಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಲಿಖಿತ ಮನವಿ ನೀಡಿದರೆ, ಇಂದು ಮಧ್ಯಾಹ್ನ 3ಗಂಟೆಯಿಂದ ನಾಳೆ ಮಧ್ಯಾಹ್ನ ೩ ಗಂಟೆಯವರೆಗೆ ಸತತವಾಗಿ ಈ ವಿಷಯದ ಮೇಲೆ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ” ಎಂದು ಶಾ ತಿಳಿಸಿದರು. ಚರ್ಚೆಯ ಕೊನೆಯಲ್ಲಿ ತಾವು ಸ್ವತಃ ಉತ್ತರಿಸುವುದಾಗಿಯೂ ಹೇಳಿದರು.
https://x.com/ANI/status/2087431491664097718
ರಾಹುಲ್ ಗಾಂಧಿ ವಾಗ್ದಾಳಿ:
ಸಂಸತ್ತಿನ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗಕ್ಕೆ ಯಾರು ಹೊಣೆ ಎಂದು ತೀವ್ರವಾಗಿ ಪ್ರಶ್ನಿಸಿದರು.
“ನಮಗೆ ಅಮಿತ್ ಶಾ ಅವರ ಉಪನ್ಯಾಸ ಕೇಳಲು ಆಸಕ್ತಿಯಿಲ್ಲ ಎಂಬುದನ್ನು ವಿರೋಧ ಪಕ್ಷಗಳು ಸ್ಪಷ್ಟಪಡಿಸಿವೆ. ‘ನಾವು’ ಎಂದರೆ ಈ ದೇಶದ ಯುವ ಪೀಳಿಗೆ. ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವಂತೆ ಪೊಲೀಸರಿಗೆ ಆದೇಶ ನೀಡಿದವರು ಯಾರು? ಒಬ್ಬ ವಿದ್ಯಾರ್ಥಿಯ ಕಣ್ಣು ಕಳೆದುಕೊಳ್ಳಲು ಕಾರಣರಾದವರು ಯಾರು? ಚೂಪಾದ ಮೊಳೆಗಳಿರುವ ಲಾಠಿಗಳಿಂದ ಹೊಡೆಯಲು ಆದೇಶಿಸಿದವರು ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ನಮ್ಮ ಮಕ್ಕಳ ಮೇಲೆ ಗುಂಡು ಹಾರಿಸಲು ಅಮಿತ್ ಶಾ ಅವರೇ ಆದೇಶ ನೀಡಿದ್ದರೆ, ಅವರು ತಕ್ಷಣ ರಾಜೀನಾಮೆ ನೀಡಬೇಕು” ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
ಅಷ್ಟೇ ಅಲ್ಲದೆ, “ಕಳೆದ 20ದಿನಗಳಿಂದ ಗೃಹ ಸಚಿವರು ಸಂಸತ್ತಿನಿಂದ ನಾಪತ್ತೆಯಾಗಿದ್ದಾರೆ. ಭಾರತದ ಗೃಹ ಸಚಿವರಿಗೆ ಧೈರ್ಯವಿಲ್ಲ, ಹಾಗಾಗಿ ಅವರು ಸದನಕ್ಕೆ ಬರುತ್ತಿಲ್ಲ” ಎಂದು ಗಾಂಧಿ ಆರೋಪಿಸಿದರು.
ಸಂಸತ್ತಿನಲ್ಲಿ ಮುಂದುವರಿದ ಕಲಾಪ ಗೊಂದಲ:
ಜುಲೈ 20 ರಂದು ಪ್ರಾರಂಭವಾದ ಸಂಸತ್ತಿನ ಮುಂಗಾರು ಅಧಿವೇಶನವು ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಆರೋಪಗಳ ಕುರಿತು ವಿರೋಧ ಪಕ್ಷಗಳ ತೀವ್ರ ಗದ್ದಲದಿಂದಾಗಿ ಪದೇ ಪದೇ ಮುಂದೂಡಲ್ಪಡುತ್ತಿದೆ.
ಇದರ ನಡುವೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸದನದಲ್ಲಿ ಗದ್ದಲ ಎಬ್ಬಿಸುತ್ತಿರುವ ವಿರೋಧ ಪಕ್ಷದ ಸದಸ್ಯರಿಗೆ ಕಲಾಪ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು. ಪ್ರತಿಭಟನೆ ಹಾಗೂ ಘೋಷಣೆಗಳನ್ನು ಕೂಗುವ ಮೂಲಕ ಸಂಸತ್ತಿನ ಘನತೆಗೆ ಧಕ್ಕೆ ತರುವುದು ಸೂಕ್ತವಲ್ಲ ಎಂದು ಅವರು ಕಿವಿಮಾತು ಹೇಳಿದರು.

