ಮಂಗಳೂರು: ತಂಗಿ ಸಾವಿನಿಂದ ತೀವ್ರವಾಗಿ ಮನನೊಂದಿದ್ದ ಸಹೋದರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಲಾಡ್ಜ್ ನಲ್ಲಿ ನಡೆದಿದೆ.
ಕೇರಳ ಮೂಲದ ಅರ್ಜುನ್ ಮಹೇಶ್ (24) ಆತ್ಮಹತ್ಯೆಗೆ ಶರಣಾದ ಯುವಕ. ಮಂಗಳೂರಿನ ಬಜಪೆ ಸಮೀಪದ ಖಾಸಗಿ ಲಾಡ್ಜ್ ವೊಂದರಲ್ಲಿ ಅರ್ಜುನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆ ಬಳಿಕ ಜೂನ್ ನಲ್ಲಿ ಅರ್ಜುನ್ ತಂಗಿ ಐಜಾ ಆತ್ಮಹತ್ಯೆಗೆ ಶರಣಾಗಿದ್ದಳು. ಕೇರಳದ ಕೋಚಿಂಗ್ ಸೆಂಟರ್ ನ ಹಾಸ್ಟೆಲ್ ನಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಳು. ತಂಗಿಯ ಸಾವಿನಿಂದ ತೀವ್ರವಗಿ ಮನನೊಂದಿದ್ದ ಅರ್ಜುನ್ ಭಾನುವಾರ ಗಲ್ಫ್ ನಿಂದ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದಾನೆ.
ಮಂಗಳೂರಿಗೆ ಬಂದ ಕೆಲವೇ ಗಂಟೆಗಳಲ್ಲಿ ಮರಪೂರಿನ ಲಾಡ್ಜ್ ರೂಂ ವೊಂದರಲ್ಲಿ ಅರ್ಜುನ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅರ್ಜುನ್ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಕುಟುಂಬದವರು ಗಾಬರಿಯಾಗಿ ಹುಡುಕಾಡಿದ್ದರು. ಇದೀಗ ಅರ್ಜುನ್ ಲಾಡ್ಜ್ ರೂಂ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮಂಗಳೂರಿನ ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

