ವಿವಾಹಿತ ಮಹಿಳೆಯರ ಅನುಮಾನಾಸ್ಪದ ಸಾವು ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮದುವೆಯಾದ ಏಳು ವರ್ಷಗಳೊಳಗೆ ಮಹಿಳೆಯೊಬ್ಬರು ತನ್ನ ಅತ್ತೆ-ಮಾವನ ಮನೆಯಲ್ಲಿ ಅಸಹಜ ರೀತಿಯಲ್ಲಿ ಮೃತಪಟ್ಟಿದ್ದರೆ, ಆಕೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂಬುದಕ್ಕೆ ಸಾಕ್ಷ್ಯಗಳಿದ್ದಲ್ಲಿ, ಅದನ್ನು ವರದಕ್ಷಿಣೆ ಹತ್ಯೆ ಎಂದು ಪರಿಗಣಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇಂತಹ ಗಂಭೀರ ಪ್ರಕರಣಗಳಲ್ಲಿ ಮಹಿಳೆಯ ಸಾವಿನಲ್ಲಿ ಪತಿ ಅಥವಾ ಅತ್ತೆ-ಮಾವನ ಮನೆಯವರ ನೇರ ಪಾತ್ರವಿದೆ ಎಂಬುದನ್ನು ಸಾಬೀತುಪಡಿಸಲು ಪ್ರತ್ಯಕ್ಷ ಸಾಕ್ಷ್ಯ ಅಥವಾ ಹೆಚ್ಚುವರಿ ಪುರಾವೆಗಳನ್ನು ಕಡ್ಡಾಯವಾಗಿ ತೋರಿಸಬೇಕಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಸಲಿಗೆ ನಡೆದಿದ್ದೇನು?
ವರದಕ್ಷಿಣೆ ಹತ್ಯೆಗೆ ಸಂಬಂಧಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್ ಈ ಮಹತ್ವದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.2010ರಲ್ಲಿ ಮಹಿಳೆಯೊಬ್ಬರು ತನ್ನ ಅತ್ತೆ-ಮಾವನ ಮನೆಯಲ್ಲೇ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದರು. ಆಕೆಯ ಕುಟುಂಬಸ್ಥರು ಇದು ಸಂಪೂರ್ಣವಾಗಿ ವರದಕ್ಷಿಣೆ ಹತ್ಯೆ ಎಂದು ಆರೋಪಿಸಿ, ಆಕೆಯ ಪತಿ ಸಂದೀಪ್ ಸಿಂಗ್ ಹೋರಾ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಕೆಳ ನ್ಯಾಯಾಲಯವು ಆತನನ್ನು ದೋಷಿ ಎಂದು ಘೋಷಿಸಿ, 2018ರಲ್ಲಿ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಂದೀಪ್ ಸಿಂಗ್ ಹೋರಾ ಅಲಹಾಬಾದ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.ಪ್ರಕರಣವನ್ನು ಪರಿಶೀಲಿಸಿದ ಹೈಕೋರ್ಟ್, ಸಂತ್ರಸ್ತೆ ತನ್ನ ಅತ್ತೆ-ಮಾವನ ಮನೆಯಲ್ಲೇ ಅನುಮಾನಾಸ್ಪದ ಹಾಗೂ ಅಸಹಜ ರೀತಿಯಲ್ಲಿ ಮೃತಪಟ್ಟಿರುವುದು ಮತ್ತು ಆಕೆಯ ಸಾವಿನ ಹಿಂದೆ ವರದಕ್ಷಿಣೆ ಕಿರುಕುಳದ ಅಂಶವಿರುವುದನ್ನು ಪ್ರಾಥಮಿಕವಾಗಿ ಒಪ್ಪಿಕೊಂಡಿತು.
ಜೀವಾವಧಿ ಶಿಕ್ಷೆ 10 ವರ್ಷಕ್ಕೆ ಇಳಿಕೆ!
ಆದರೆ ಕೆಳ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದರು.ದೋಷಿ ಎಂದು ತೀರ್ಪು ಬಂದಿದ್ದ ಪತಿ ಸಂದೀಪ್ ಸಿಂಗ್ ಹೋರಾಗೆ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲು ಕಾರಣವಾದ ಬಲವಾದ ಅಂಶಗಳು ಅಥವಾ ವಿಶೇಷ ಸಂದರ್ಭಗಳನ್ನು ಕೆಳ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸಮರ್ಪಕವಾಗಿ ವಿವರಿಸಿಲ್ಲ ಎಂದು ಹೈಕೋರ್ಟ್ ತಿಳಿಸಿತು.
ಕಾನೂನಿನ ಪ್ರಕಾರ ಅತ್ಯಂತ ಅಪರೂಪದ ಹಾಗೂ ಗಂಭೀರ ಪ್ರಕರಣಗಳಲ್ಲಿ ಮಾತ್ರ ಜೀವಾವಧಿ ಅಥವಾ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯ ಹೇಳಿದೆ.ಇದಲ್ಲದೆ, ಘಟನೆ ನಡೆದು 16 ವರ್ಷಗಳಾಗಿರುವುದು, ಆರೋಪಿ ಪ್ರಸ್ತುತ ಸುಮಾರು 40 ವರ್ಷ ವಯಸ್ಸಿನವನಾಗಿರುವುದು, ಕಳೆದ 7 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವುದು ಹಾಗೂ ಜೈಲಿನಲ್ಲಿದ್ದ ಅವಧಿಯಲ್ಲಿ ಆತನ ವರ್ತನೆಯ ಕುರಿತು ಯಾವುದೇ ಪ್ರತಿಕೂಲ ವರದಿ ಇಲ್ಲದಿರುವುದನ್ನು ನ್ಯಾಯಾಲಯ ಪರಿಗಣಿಸಿತು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆರೋಪಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು 10 ವರ್ಷಗಳಿಗೆ ಇಳಿಸಿತು. ಈಗಾಗಲೇ ಆತ ಜೈಲಿನಲ್ಲಿ ಕಳೆದ ಅವಧಿಯನ್ನು ಈ ಶಿಕ್ಷೆಯಲ್ಲಿ ಪರಿಗಣಿಸಬೇಕು ಎಂದು ನ್ಯಾಯಾಲಯ ಆದೇಶಿಸಿತು.ಆದರೆ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498-A, 406 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 ಅಡಿಯಲ್ಲಿ ಆತನ ವಿರುದ್ಧ ದಾಖಲಾಗಿದ್ದ ದೋಷನಿರ್ಣಯವನ್ನು ಹೈಕೋರ್ಟ್ ಬದಲಾಯಿಸದೆ ಹಾಗೆಯೇ ಉಳಿಸಿತು.

