ಬೆಂಗಳೂರು: ಸಚಿವ ಸ್ಥನ ಕೈತಪ್ಪಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನಗೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖುದ್ದು ದಿನೇಶ್ ಗುಂಡೂರಾವ್ ಅವರ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ದೆಹಲಿ ಪ್ರವಾಸಕ್ಕೂ ಮುನ್ನ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ದಿನೇಶ್ ಗುಂಡೂರಾವ್ ನಿವಾಸಕ್ಕೆ ತೆರಳಿದ ಸಿಎಂ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಜೊತೆ ಕೆಲ ಕಾಲ ಮಾತುಕತೆ ನಡೆಸಿದರು.
ಈ ವೇಳೆ ಸಚಿವರಾದ ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್ ಮೊದಲಾದವರು ಉಪಸ್ಥಿತರಿದ್ದರು. ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಭೇಟಿಗೂ ಮುನ್ನ ಸಿಎಂ ಡಿ.ಕೆ.ಶಿವಕುಮಾರ್ ದಿನೇಶ್ ಗುಂಡೂರಾವ್ ಭೇಟಿಯಾಗಿದ್ದು ಕುತೂಹಲ ಮೂಡಿಸಿದೆ.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡುರಾವ್, ಎಲ್ಲರೂ ಪಕ್ಷದ ಕೆಲಸ ಮಾಡಿಕೊಂಡು ಹೋಗಬೇಕು. ಸಿಎಂ ಜೊತೆ ಸಚಿವರುಗಳು ಬಂದಿದ್ದರು. ಎಲ್ಲಾ ವಿಚಾರದ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ಗೊತ್ತಿದೆ ಎಂದು ಹೇಳಿದರು.

