HomeLive Newsಕೋರ್ಟ್ ಷರತ್ತು ಉಲ್ಲಂಘಿಸಿ ದೆಹಲಿಗೆ ತೆರಳಿದ ಸಚಿವ ನಾಗೇಂದ್ರ

ಕೋರ್ಟ್ ಷರತ್ತು ಉಲ್ಲಂಘಿಸಿ ದೆಹಲಿಗೆ ತೆರಳಿದ ಸಚಿವ ನಾಗೇಂದ್ರ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಅವರು ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ವೇಳೆ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಇದೀಗ ಅವರು ಕೋರ್ಟ್ ವಿಧಿಸಿದ್ದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ದೆಹಲಿಗೆ ಪ್ರವಾಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕೋರ್ಟ್ ಷರತ್ತು ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ಪ್ರಯಾಣ ಬೆಳೆಸಿರುವ ಆರೋಪ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಸಾಕ್ಷ್ಯ ಸಂಗ್ರಹಕ್ಕೆ ಇಳಿದಿದೆ. ಆರೋಪ ಸಾಬೀತಾದರೆ ನಾಗೇಂದ್ರ ಅವರ ಜಾಮೀನು ರದ್ದುಗೊಳಿಸಲು ಇ.ಡಿ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.

ವಾಲ್ಮೀಕಿ ನಿಗಮದ ಹಗರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2024ರ ಅಕ್ಟೋಬರ್ 14ರಂದು ನಾಗೇಂದ್ರ ಅವರಿಗೆ ಜಾಮೀನು ನೀಡುವಾಗ, ಕರ್ನಾಟಕ ರಾಜ್ಯದಿಂದ ಹೊರಗೆ ಪ್ರಯಾಣಿಸಬೇಕಾದರೆ ನ್ಯಾಯಾಲಯದಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯುವುದು ಕಡ್ಡಾಯ ಎಂಬ ಸ್ಪಷ್ಟ ಷರತ್ತು ವಿಧಿಸಿತ್ತು. ಕಠಿಣ ಷರತ್ತುಗಳಿದ್ದರೂ ನಾಗೇಂದ್ರ ಅವರು ನ್ಯಾಯಾಲಯದ ಅನುಮತಿ ಪಡೆಯದೇ ಇದೇ ಜುಲೈ 15 ಮತ್ತು ಜುಲೈ 26ರಂದು ದೆಹಲಿಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಜುಲೈ 15ರ ಸಂಜೆ 6:15ರ ಇಂಡಿಗೋ ವಿಮಾನ ಹಾಗೂ ಜುಲೈ 26ರ ಮಧ್ಯಾಹ್ನ 1:55ರ ವಿಮಾನದಲ್ಲಿ ಅವರು ದೆಹಲಿಗೆ ತೆರಳಿದ್ದರೆಂದು ಇಡಿಗೆ ಮಾಹಿತಿ ಲಭಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಇಡಿ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು, ಶಿಷ್ಟಾಚಾರ (Protocol) ವಿಭಾಗದ ರಿಜಿಸ್ಟರ್‌ಗಳು ಹಾಗೂ ವಿಮಾನಯಾನ ಸಂಸ್ಥೆಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ನ್ಯಾಯಾಲಯವು ಈ ಹಿಂದೆ ಮೂರು ಬಾರಿ ಮಾತ್ರ ನಾಗೇಂದ್ರ ಅವರಿಗೆ ರಾಜ್ಯದಿಂದ ಹೊರಗೆ ಹೋಗಲು ಅನುಮತಿ ನೀಡಿತ್ತು 2026ರ ಏಪ್ರಿಲ್ 26 ರಿಂದ ಜೂನ್ 2ರವರೆಗೆ, ಜೂನ್ 11 ರಿಂದ ಜುಲೈ 7ರವರೆಗೆ, ಜುಲೈ 16 ರಿಂದ ಜುಲೈ 25ರವರೆಗೆ ನ್ಯಾಯಾಲಯದಿಂದ ಅನುಮತಿ ಸಿಕ್ಕಿತ್ತು. ನ್ಯಾಯಾಲಯ ಅನುಮತಿ ನೀಡಿದ್ದ ಅವಧಿಗಿಂತ ಹೊರತಾಗಿ ಜುಲೈ 15 ಹಾಗೂ ಜುಲೈ 26ರಂದು ನಾಗೇಂದ್ರ ಅವರು ದೆಹಲಿಯಲ್ಲಿ ಕಾಣಿಸಿಕೊಂಡಿರುವುದು ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಜುಲೈ 17ರಂದು ಮಾತ್ರ ಎಐಸಿಸಿ ಕೇಂದ್ರ ಕಚೇರಿ ಆವರಣದಲ್ಲಿ ವಿಜಯಾನಂದ ಕಾಶಪ್ಪನವರ್, ಅಜಯ್‌ ಸಿಂಗ್‌, ಶಾಸಕರಾದ ಎ.ಎಸ್. ಪೊನ್ನಣ್ಣ, ಎನ್.ಎಚ್. ಕೋನರೆಡ್ಡಿ ಅವರ ಜೊತೆ ಇರುವುದು ಮಾತ್ರ ಕೆಲವು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಆದರೆ, ಆ ದಿನ ಅವರ ದೆಹಲಿ ಪ್ರವಾಸಕ್ಕೆ ಕೋರ್ಟ್ ಅನುಮತಿ ಇತ್ತು ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular