ಉದ್ಯೋಗ, ಶಿಕ್ಷಣ ಅಥವಾ ಇನ್ಯಾವುದೇ ಕಾರಣಕ್ಕಾಗಿ ಹೊಸ ಮನೆಗೆ ಅಥವಾ ಬೇರೆ ನಗರಕ್ಕೆ ಸ್ಥಳಾಂತರಗೊಂಡಾಗ LPG ಗ್ಯಾಸ್ ಸಂಪರ್ಕವನ್ನು ಹೊಸ ವಿಳಾಸಕ್ಕೆ ವರ್ಗಾಯಿಸುವುದು ದೊಡ್ಡ ಸವಾಲು ಎಂದು ಹಲವರು ಭಾವಿಸುತ್ತಾರೆ. ಆದರೆ, ಸರಿಯಾದ ಹಂತಗಳು ಮತ್ತು ಅಗತ್ಯ ದಾಖಲೆಗಳಿದ್ದರೆ ಇಂಡೇನ್, ಭಾರತ್ ಗ್ಯಾಸ್ ಹಾಗೂ ಎಚ್ಪಿ ಗ್ಯಾಸ್ ಸಂಪರ್ಕವನ್ನು ಯಾವುದೇ ಕಿರಿಕಿರಿಯಿಲ್ಲದೆ ಸುಲಭವಾಗಿ ವರ್ಗಾಯಿಸಬಹುದು.
ವರ್ಗಾವಣೆಗೆ ಬೇಕಾಗುವ ಮುಖ್ಯ ದಾಖಲೆಗಳು
ಗ್ಯಾಸ್ ಸಂಪರ್ಕ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಿ:
ಗ್ಯಾಸ್ ಪಾಸ್ಬುಕ್ / ಸಬ್ಸ್ಕ್ರಿಪ್ಷನ್ ವೋಚರ್ (SV)
ಗುರುತಿನ ಚೀಟಿ: ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ.
ಹೊಸ ವಿಳಾಸದ ಪುರಾವೆ: ಆಧಾರ್, ಬಾಡಿಗೆ ಕರಾರು ಪತ್ರ, ವಿದ್ಯುತ್ ಬಿಲ್ ಇತ್ಯಾದಿ.
ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು
ಸಿಲಿಂಡರ್ ಹಾಗೂ ರೆಗ್ಯುಲೇಟರ್ (ಬೇರೆ ನಗರಕ್ಕೆ ಸ್ಥಳಾಂತರಗೊಳ್ಳುತ್ತಿದ್ದರೆ)
ಹಂತ-ಹಂತದ ವರ್ಗಾವಣೆ ಪ್ರಕ್ರಿಯೆ
ಹಳೆಯ ಏಜೆನ್ಸಿಯಿಂದ ‘ಟರ್ಮಿನೇಷನ್ ವೋಚರ್’ ಪಡೆಯಿರಿ:
ಪ್ರಸ್ತುತ ಬಳಸುತ್ತಿರುವ ಗ್ಯಾಸ್ ಏಜೆನ್ಸಿಗೆ ತೆರಳಿ ವರ್ಗಾವಣೆ ಅರ್ಜಿ ಸಲ್ಲಿಸಿ. ಬೇರೆ ನಗರಕ್ಕೆ ಹೋಗುವುದಾದರೆ, ನಿಮ್ಮಲ್ಲಿರುವ ಸಿಲಿಂಡರ್ ಮತ್ತು ರೆಗ್ಯುಲೇಟರ್ ಅನ್ನು ಏಜೆನ್ಸಿಗೆ ವಾಪಸ್ ನೀಡಿ ‘ಟರ್ಮಿನೇಷನ್ ವೋಚರ್’ (Termination Voucher – TV) ಹಾಗೂ ಠೇವಣಿ ಹಣವನ್ನು ಹಿಂಪಡೆಯಿರಿ. (ಒಂದೇ ನಗರದಲ್ಲಿ ಏಜೆನ್ಸಿ ಮಾತ್ರ ಬದಲಾಯಿಸುವುದಾದರೆ ಸಿಲಿಂಡರ್ ಹಸ್ತಾಂತರಿಸುವ ಅಗತ್ಯವಿರುವುದಿಲ್ಲ, ‘ಟ್ರಾನ್ಸ್ಫರ್ ವೋಚರ್’ ಪಡೆಯಬಹುದು).
ಹೊಸ ಏಜೆನ್ಸಿಗೆ ದಾಖಲೆ ಸಲ್ಲಿಕೆ:
ನೀವು ಸ್ಥಳಾಂತರಗೊಂಡ ಹೊಸ ಪ್ರದೇಶದ ಅಧಿಕೃತ ಗ್ಯಾಸ್ ವಿತರಕರ ಬಳಿಗೆ ತೆರಳಿ, ಹಳೆಯ ಏಜೆನ್ಸಿಯಿಂದ ಪಡೆದ ಟರ್ಮಿನೇಷನ್ ವೋಚರ್ (TV), ಹೊಸ ವಿಳಾಸದ ಪುರಾವೆ, ಗುರುತಿನ ಚೀಟಿ ಮತ್ತು ಫೋಟೋಗಳನ್ನು ಸಲ್ಲಿಸಿ.
ಹೊಸ ಗ್ರಾಹಕ ಐಡಿ ಪಡೆಯಿರಿ:
ದಾಖಲೆಗಳ ಪರಿಶೀಲನೆ ಮುಗಿದ ನಂತರ, ಹೊಸ ಏಜೆನ್ಸಿಯವರು ನಿಮಗೆ ಹೊಸ ಗ್ರಾಹಕ ಐಡಿ (Consumer ID), ಹೊಸ ಗ್ಯಾಸ್ ಪಾಸ್ಬುಕ್ ಹಾಗೂ ಹೊಸ ಸಿಲಿಂಡರ್ ಒದಗಿಸುತ್ತಾರೆ.
ಆನ್ಲೈನ್ನಲ್ಲೂ ಮಾಡಬಹುದು ವರ್ಗಾವಣೆ
ಸೇವಾ ಸಂಸ್ಥೆಗಳ ಅಧಿಕೃತ ವೆಬ್ಸೈಟ್ಗಳು ಅಥವಾ ಮೊಬೈಲ್ ಆಪ್ಗಳ ಮೂಲಕವೂ ಗ್ಯಾಸ್ ಸಂಪರ್ಕ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು:
ಇಂಡೇನ್ ಗ್ಯಾಸ್: IndianOil One ಆಪ್ / ಅಧಿಕೃತ ವೆಬ್ಸೈಟ್
ಭಾರತ್ ಗ್ಯಾಸ್: Ebharatgas ಪೋರ್ಟಲ್
ಎಚ್ಪಿ ಗ್ಯಾಸ್: myhpgas ಪೋರ್ಟಲ್
ನಿಮ್ಮ ಖಾತೆಗೆ ಲಾಗಿನ್ ಆಗಿ ‘Change Distributor’ ಅಥವಾ ‘Transfer Connection’ ಆಯ್ಕೆಯನ್ನು ಬಳಸಿ ಹೊಸ ವಿಳಾಸದ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು.
ಗ್ಯಾಸ್ ಸಬ್ಸಿಡಿ ಹಣ ನೇರವಾಗಿ ಬ್ಯಾಂಕ್ಗೆ ಜಮೆಯಾಗಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.

