ಬೆಂಗಳೂರು: ನೈತಿಕ ಪೊಲೀಸ್ಗಿರಿ, ಕಾನೂನನ್ನು ಕೈಗೆತ್ತಿಕೊಳ್ಳುವ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಸಾಮಾಜಿಕ ಮಾಧ್ಯಮ ಆಕ್ಟಿವಿಸಂಗೆ ಕಡಿವಾಣ ಹಾಕಬೇಕಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡುವುದಕ್ಕಾಗಿ, ಲೈಕ್, ಶೇರ್ಗಾಗಿ, ವಿವಿಧ ಸ್ಥಳಗಳಿಗೆ ತೆರಳಿ ಅಲ್ಲಿನ ವ್ಯಕ್ತಿಗಳ ಗುರುತು, ಊರು, ರಾಜ್ಯ ಸೇರಿದಂತೆ ಹಲವು ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ಪೊಲೀಸ್ ತನಿಖೆಯನ್ನು ದಿಕ್ಕು ತಪ್ಪಿಸುತ್ತಿರುವುದು ಕಂಡುಬಂದಿದೆ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆಯುವುದಕ್ಕಾಗಿ ಇಂತಹ ಕೆಲಸಗಳಿಗೆ ಆಸ್ಪದ ನೀಡಲು ಸಾಧ್ಯವಿಲ್ಲ. ಇದರಿಂದ ರಾಜ್ಯದ ಭದ್ರತೆ ಹಾಗೂ ಸಾಮಾಜಿಕ ಸೌಹಾರ್ದತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಕ್ರಮ ವಲಸಿಗರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಳ್ಳುವುದರಿಂದ ಅಂತಹ ಜಾಲಕ್ಕೆ ಇನ್ನಷ್ಟು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಯಾರಿಗಾದರೂ ಅಕ್ರಮ ವಲಸೆ, ನಕಲಿ ದಾಖಲೆಗಳು, ಅಕ್ರಮ ಉದ್ಯೋಗ ಅಥವಾ ಇಂತಹ ಯಾವುದೇ ಚಟುವಟಿಕೆಗಳ ಕುರಿತು ನಿಖರ ಮಾಹಿತಿ ಇದ್ದರೆ, ಅದನ್ನು ಪೊಲೀಸರಿಗೆ ನೀಡಿ. ಕಾನೂನುಬದ್ಧವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನೈತಿಕ ಪೊಲೀಸ್ಗಿರಿ, ಕಾನೂನನ್ನು ಕೈಗೆತ್ತಿಕೊಳ್ಳುವ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಸಾಮಾಜಿಕ ಮಾಧ್ಯಮ ಆಕ್ಟಿವಿಸಂಗೆ ಕಡಿವಾಣ ಹಾಕಬೇಕಾಗುತ್ತದೆ ಎಂದು ಹೇಳಿದ್ದಾರೆ.
ಯಾರು ಎಲ್ಲಿಂದ ಬಂದಿದ್ದಾರೆ, ಅವರಿಗೆ ಆಧಾರ್ ಸೇರಿದಂತೆ ಗುರುತಿನ ದಾಖಲೆಗಳು ಹೇಗೆ ದೊರೆತಿವೆ, ಉದ್ಯೋಗವನ್ನು ಯಾರು ಒದಗಿಸಿದ್ದಾರೆ, ಅವರ ದಾಖಲೆಗಳ ಪರಿಶೀಲನೆ ಹೇಗೆ ನಡೆದಿದೆ ಎಂಬ ಮೂಲ ಜಾಲವನ್ನು ಪತ್ತೆಹಚ್ಚುವುದು ಮತ್ತು ಅದರ ವಿರುದ್ಧ ಕ್ರಮ ಕೈಗೊಳ್ಳುವುದು ಪೊಲೀಸರ ಜವಾಬ್ದಾರಿಯಾಗಿದೆ. ಅದನ್ನು ಕರ್ನಾಟಕ ಪೊಲೀಸ್ ಇಲಾಖೆ ಸಮರ್ಥವಾಗಿ ನಡೆಸುತ್ತದೆ ಹಾಗೂ ನಾವು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪೊಲೀಸರ ತನಿಖೆ ಮತ್ತು ಕಾರ್ಯಾಚರಣೆಗಳಲ್ಲಿ ಗೋಪ್ಯತೆ ಕಾಪಾಡಬೇಕಾಗಿರುವುದರಿಂದ ಪ್ರತಿಯೊಂದು ಕಾರ್ಯಾಚರಣೆಯನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ರಾಜ್ಯದ ಹಿತಾಸಕ್ತಿ ಬಯಸುವ ಪ್ರತಿಯೊಬ್ಬರೂ ಪೊಲೀಸರೊಂದಿಗೆ ಕೈಜೋಡಿಸಿ, ಮಾಹಿತಿಯನ್ನು ಸರಿಯಾದ ಮಾರ್ಗದಲ್ಲಿ ಹಂಚಿಕೊಳ್ಳಬೇಕು. ಅದರ ಬದಲು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

