ಬೆಂಗಳೂರು: ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದು, ನಟ ಶಿವರಾಜ್ ಕುಮಾರ್ ಅವರ ಮಾತುಗಳು ವಿಶೇಷ ಗಮನ ಸೆಳೆದಿವೆ.
ಟ್ರೈಲರ್ ವೀಕ್ಷಿಸಿದ ಬಳಿಕ ಮಾತನಾಡಿದ ಶಿವಣ್ಣ, “ನಿಮಗೆ ಟ್ರೈಲರ್ ನೋಡಿ ಏನನಿಸುತ್ತೋ, ನನಗೂ ಹಾಗೇ ಅನಿಸಿತು” ಎಂದು ಹೇಳುವ ಮೂಲಕ ತಮ್ಮ ಪ್ರತಿಕ್ರಿಯೆ ಹಂಚಿಕೊಂಡರು. ಚಿತ್ರದ ನಿರ್ದೇಶನ, ಕ್ಯಾಮೆರಾ ಕೆಲಸ ಸೇರಿದಂತೆ ಟ್ರೈಲರ್ನ ಹಲವು ಅಂಶಗಳನ್ನು ಅವರು ಮೆಚ್ಚಿಕೊಂಡರು.
ಯಶ್ ಈ ಮಟ್ಟಕ್ಕೆ ಬೆಳೆದಿರುವುದು ಖುಷಿಯ ವಿಚಾರ ಎಂದ ಶಿವಣ್ಣ, ಟ್ರೈಲರ್ ನೋಡಿ ತಮಗೂ ಸಂತೋಷವಾಗಿದೆ ಎಂದು ಹೇಳಿದರು. ಇದೇ ವೇಳೆ, ಕಾರ್ಯಕ್ರಮದಲ್ಲಿದ್ದ ಮಾಧ್ಯಮದವರು ಮತ್ತು ಚಿತ್ರತಂಡದವರಿಗೂ ಟ್ರೈಲರ್ ಹೇಗನಿಸಿತು ಎಂದು ಪ್ರಶ್ನಿಸಿದರು.
ನಟಿ ರುಕ್ಮಿಣಿ ವಸಂತ್ ಕೂಡ ‘ಟಾಕ್ಸಿಕ್’ ತಂಡದ ಕೆಲಸವನ್ನು ಮೆಚ್ಚಿಕೊಂಡರು. ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಕೆಲಸವನ್ನು ಕೊಂಡಾಡಿದ ಅವರು, ರಾಧಿಕಾ ಪಂಡಿತ್ ಅವರ ಅಭಿಮಾನಿ ಎಂಬುದನ್ನೂ ವೇದಿಕೆಯಲ್ಲಿ ಹಂಚಿಕೊಂಡರು.
ಕನ್ನಡದ ಜಾಗತಿಕ ತಾರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ 4 ನಿಮಿಷ 38 ಸೆಕೆಂಡ್ಗಳ ಸುದೀರ್ಘ ಟ್ರೇಲರ್ ಬಿಡುಗಡೆಯಾಗಿದ್ದು, ಅದರಲ್ಲಿನ ‘ಇಟ್ಸ್ ಟೈಮ್- ಐ ಆಮ್ ಕಮಿಂಗ್’ (It’s Time- I’m Coming) ಎಂಬ ಪವರ್ಫುಲ್ ಮಾಸ್ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದೆ. ಚಿತ್ರದಲ್ಲಿ ಹಿಂಸೆ ಮಿತಿಮೀರಿದಾಗ ನಾಯಕ ‘ಅವತಾರ ಎತ್ತುವಂತೆ’ ಮೂಡಿಬಂದಿರುವ ಈ ಸಾಲುಗಳು ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ.
ದ್ವಿಪಾತ್ರದಲ್ಲಿ ಯಶ್ ಮೆರುಗು, ರಕ್ತಪಾತದ ನಡುವೆ ಅಪ್ಪ-ಮಗನ ಸೆಂಟಿಮೆಂಟ್
ಟ್ರೇಲರ್ನ ಉದ್ದಕ್ಕೂ ಯಶ್ ದ್ವಿಪಾತ್ರದಲ್ಲಿ ವಿಭಿನ್ನ ಶೈಲಿಯ ಲುಕ್ ಹಾಗೂ ಮ್ಯಾನರಿಸಂ ಮೂಲಕ ಇಡೀ ವೀಡಿಯೊವನ್ನು ಆವರಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅತಿಯಾದ ಹಿಂಸೆ, ಕ್ರೌರ್ಯ ಮತ್ತು ರಕ್ತಪಾತದ ಜೊತೆಗೆ ತಂದೆ-ಮಗನ ಬಾಂಧವ್ಯ ಹಾಗೂ ಸೆಂಟಿಮೆಂಟ್ಸ್ ಬೆಸೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಪ್ಪ-ಮಗನ ನಡುವಿನ ಈ ಭಾಂದವ್ಯವೇ ಮುಂದೆ ದೊಡ್ಡ ದ್ವೇಷದ ದಳ್ಳುರಿಗೆ ದಾರಿಯಾದಂತೆ ಮೂಡಿಬಂದಿದ್ದು, ಒಟ್ಟಾರೆ ಕಥೆಯು ಪ್ರೀತಿ, ಅಧಿಕಾರ ಮತ್ತು ಮೋಸದ ಬಲೆಯ ಸುತ್ತ ಸಾಗಲಿದೆ ಎಂಬ ಸುಳಿವು ನೀಡುತ್ತದೆ.
ಐವರು ನಾಯಕಿಯರು; ಗ್ಲಾಮರ್ ಮತ್ತು ಗಂಭೀರತೆಯ ಸಮ್ಮಿಲನ:
ಚಿತ್ರದಲ್ಲಿನ ಐವರು ಪ್ರಮುಖ ನಾಯಕಿಯರ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿ ಮೂಡಿಬಂದಿವೆ:
ಗ್ಲಾಮರಸ್ ಜುಗಲ್ಬಂದಿ: ತಾರಾ ಸುತಾರಿಯಾ ಹಾಗೂ ಕಿಯಾರಾ ಅಡ್ವಾಣಿ ಅವರ ಪಾತ್ರಗಳು ಪ್ರಣಯ ಹಾಗೂ ರೊಮ್ಯಾಂಟಿಕ್ ಮೂಡ್ ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ.
ಗಂಭೀರ ಪಾತ್ರಗಳು: ಇದಕ್ಕೆ ತದ್ವಿರುದ್ಧ ಎಂಬಂತೆ ನಯನತಾರಾ ಹಾಗೂ ರುಕ್ಮಿಣಿ ವಸಂತ್ ಅವರ ಪಾತ್ರಗಳು ಯಶ್ ಪಾತ್ರಕ್ಕೇ ಉಪದೇಶ ನೀಡುವಂತಹ ಗಂಭೀರ ಶೇಡ್ನಲ್ಲಿವೆ.
ಊಹೆಗೂ ಸಿಗದ ವಿಭಿನ್ನ ಕಥಾಹಂದರ:
ನಾಯಕನ ಮುಖಕ್ಕೆ ಉಗಿಯುವ ನಾಯಕಿ, ಮತ್ತೊಂದೆಡೆ ನಾಯಕನನ್ನು ಅನಾಗರೀಕ ಎಂದು ದೂರುವ ಇನ್ನೊಬ್ಬ ನಾಯಕಿ ಹೀಗೆ ಪ್ರತಿಯೊಂದು ದೃಶ್ಯವೂ ಕಥೆಯ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ. ಕಥೆಯ ಮುಖ್ಯ ಎಳೆಯನ್ನು ಅತ್ಯಂತ ರಹಸ್ಯವಾಗಿಟ್ಟಿದ್ದು, ಕೇವಲ ಟ್ರೇಲರ್ ನೋಡಿ ಸಿನಿಮಾದ ಪಕ್ಕಾ ಕಥೆಯನ್ನು ಊಹಿಸುವುದು ಅಸಾಧ್ಯ ಎನ್ನುವ ರೀತಿಯಲ್ಲಿ ಚಿತ್ರತಂಡ ಟ್ರೇಲರ್ ಕಟ್ ಮಾಡಿದೆ.

