ನವದೆಹಲಿ : ‘ನಿಮ್ಮ ಮೇಲೆ ನಮಗೆ ನಂಬಿಕೆ ಇದೆ, ದೇಶಕ್ಕೆ ನಿಮ್ಮ ಅಗತ್ಯವಿದೆ’ ಎಂದು Gen Zಗೆ ಪ್ರಧಾನಿ ಮೋದಿ ಸಂದೇಶ ರವಾನಿಸಿದರು. ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯ ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭದಲ್ಲಿ ಯುವಜನರನ್ನು ಉದ್ದೇಶಿಸಿ ಮಾತನಾಡಿದರು. ಇದು ಇತ್ತೀಚಿನ ಸಿಜೆಪಿ ಪ್ರತಿಭಟನೆಗಳ ಬಳಿಕ ಅವರ ಮೊದಲ ಸಾರ್ವಜನಿಕ ಭಾಷಣವಾಗಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಾಕ್‌ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗಳ ಬಳಿಕ ಮೊದಲ ಸಾರ್ವಜನಿಕ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಯುವ ಪೀಳಿಗೆಯ ಸಾಮರ್ಥ್ಯ ಮತ್ತು ಶಕ್ತಿಯ ಬಗ್ಗೆ ವಿಶ್ವಾಸ ವ್ಯಕ್ತಪಡಸಿದರು. ‘ವಿಕಸಿತ ಭಾರತ’ದ ನಿರ್ಮಾಣದ ಪಯಣದಲ್ಲಿ ದೇಶಕ್ಕೆ ಯುವಜನರ ಅಗತ್ಯವಿದೆ ಎಂದು ಹೇಳಿದರು.
ನವದೆಹಲಿಯ ಪ್ರತಿಷ್ಠಿತ ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ನಿಮ್ಮ ಮೇಲೆ ನಮಗೆ ನಂಬಿಕೆ ಇದೆ. ದೇಶಕ್ಕೆ ನಿಮ್ಮ ಅಗತ್ಯವಿದೆ” ಎಂದು ಯುವಜನರನ್ನುದ್ದೇಶಿಸಿ ಹೇಳಿದರು.ಪ್ರತಿಯೊಂದು ಪೀಳಿಗೆಗೂ ತನ್ನದೇ ಆದ ರಾಷ್ಟ್ರೀಯ ಹೊಣೆಗಾರಿಕೆ ಇರುತ್ತದೆ. ಯುವಜನರ ಗುರಿಗಳು ದೇಶದ ಸಮಗ್ರ ಅಭಿವೃದ್ಧಿಯನ್ನೂ ಒಳಗೊಂಡಿರಬೇಕು ಎಂದು ಅವರು ಹೇಳಿದರು.
“ಪ್ರತಿಯೊಂದು ಪೀಳಿಗೆಯೂ ತನ್ನ ಕಾಲದ ನಿರ್ದಿಷ್ಟ ಸವಾಲುಗಳನ್ನು ಎದುರಿಸುತ್ತದೆ. ಅದೇ ಸಮಯದಲ್ಲಿ ತನ್ನದೇ ಆದ ರಾಷ್ಟ್ರೀಯ ಹೊಣೆಗಾರಿಕೆಯನ್ನೂ ಹೊಂದಿರುತ್ತದೆ. ಮುಂದಿನ 30ರಿಂದ 35 ವರ್ಷಗಳಲ್ಲಿ ನೀವು ಮಾಡುವ ಪ್ರತಿಯೊಂದು ಕಾರ್ಯವೂ ‘ವಿಕಸಿತ ಭಾರತ’ದತ್ತ ನಮ್ಮ ಪಯಣದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಆಧಾರವೂ ‘ಇದರಿಂದ ದೇಶಕ್ಕೆ ಹೇಗೆ ಪ್ರಯೋಜನವಾಗಲಿದೆ? ದೇಶದ ಯಾವ ಅಗತ್ಯವನ್ನು ಇದು ಪೂರೈಸಲಿದೆ?’ ಎಂಬುದಾಗಿರಬೇಕು” ಎಂದು ಮೋದಿ ಹೇಳಿದರು.
ತಂತ್ರಜ್ಞಾನ ಬದಲಾವಣೆಗೆ ಹೊಂದಿಕೊಳ್ಳುವವರಿಗೆ ಯಶಸ್ಸು
ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಬದಲಾವಣೆಗಳಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳುವವರು ಅಂತಿಮವಾಗಿ ಯಶಸ್ವಿಯಾಗುತ್ತಾರೆ ಎಂದು ತಿಳಿಸಿದರು.ಜಾಗತಿಕ ಕಾರ್ಯತಂತ್ರದ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ. ತಾಂತ್ರಿಕ ಪ್ರಗತಿಯ ವೇಗದಿಂದ ಜಾಗತಿಕ ಶಕ್ತಿಯ ಸಮತೋಲನ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ ಎಂದು ಅವರು ಹೇಳಿದರು.
“ಮುಂದಿನ 20 ಅಥವಾ 30 ವರ್ಷಗಳಲ್ಲಿ ಜಗತ್ತು ಹೇಗಿರಲಿದೆ ಎಂಬುದನ್ನು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಜಗತ್ತು, ತಂತ್ರಜ್ಞಾನ, ಕೈಗಾರಿಕೆಗಳು ಮತ್ತು ವೃತ್ತಿಗಳು ಬದಲಾಗುತ್ತವೆ. ಆದರೆ ಒಂದು ವಿಷಯವನ್ನು ನೆನಪಿಡಿ: ನಿರಂತರವಾಗಿ ಕಲಿಯುತ್ತಿರುವವರು ಯಶಸ್ವಿಯಾಗುತ್ತಾರೆ” ಎಂದು ಮೋದಿ ಹೇಳಿದರು.
Gen Z ಶೈಲಿಯಲ್ಲಿ ಯುವಜನರಿಗೆ ಮೋದಿ ಸಂದೇಶ
ಸ್ಕೈರೂಟ್‌ನ ವಿಕ್ರಮ್-1 ರಾಕೆಟ್‌ನ ಯಶಸ್ವಿ ಉಡಾವಣೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಯುವಜನರು ದೇಶಕ್ಕೆ ಕೊಡುಗೆ ನೀಡಲು ಸರ್ಕಾರ ಹಲವು ಹೊಸ ಅವಕಾಶಗಳನ್ನು ತೆರೆದಿದೆ ಎಂದು ಹೇಳಿದರು.“ನಮ್ಮ ಯುವಕರು ಕೊಡುಗೆ ನೀಡಲು ಹಲವು ಮಾರ್ಗಗಳನ್ನು ತೆರೆದಿದ್ದೇವೆ. ಹೊಸ ಕ್ಷೇತ್ರಗಳನ್ನು ತೆರೆಯಲಾಗಿದೆ. ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ನಾನು ಈ ಹಿಂದೆ ಮಾತನಾಡಿದ್ದೆ. ಇಂದು ಅದೇ ಬಾಹ್ಯಾಕಾಶ ಕ್ಷೇತ್ರ ನಮ್ಮ ಯುವಕರಿಗೆ ಆಕಾಶದಂತಾಗಿದೆ” ಎಂದು ಮೋದಿ ಹೇಳಿದರು.
Gen Z ಸ್ಪರ್ಶ ನೀಡಿದ ಅವರು,“ಇಂದು ನಮ್ಮ ಯುವಕರು ‘ನನ್ನ ಕುಟುಂಬದಲ್ಲಿ ರಾಕೆಟ್ ನಿರ್ಮಿಸಿದ ಮೊದಲ ವ್ಯಕ್ತಿ ನಾನು’ ಎಂದು ಹೇಳುತ್ತಿದ್ದಾರೆ. ಇಂದು ನಮ್ಮ ಯುವಕರು ರಾಕೆಟ್‌ಗಳನ್ನು ಉಡಾಯಿಸುತ್ತಿದ್ದಾರೆ” ಎಂದರು.ದೇಶದ ಡ್ರೋನ್ ಕ್ಷೇತ್ರವೂ ವೇಗವಾಗಿ ವಿಸ್ತರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ರಾಷ್ಟ್ರೀಯ ಭದ್ರತೆ ಸೇರಿದಂತೆ ಔಷಧಿಗಳನ್ನು ಸಾಗಿಸಲು ಕೂಡ ಡ್ರೋನ್‌ಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿದರು.
NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ನವದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ CJP ಪ್ರತಿಭಟನೆಗಳ ಬಳಿಕ ಪ್ರಧಾನಿ ಮೋದಿಯವರ ಈ ಭಾಷಣ ನಡೆದಿದೆ. ಈ ಪ್ರತಿಭಟನೆಗಳ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು.

