ಬೆಂಗಳೂರು: ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ವೇಳೆ ಕ್ಯಾಪಿಟೇಶನ್ ಶುಲ್ಕ (Donation/Capitation Fee) ವಸೂಲಿ ಮಾಡುವುದು ಹಾಗೂ ವಿದ್ಯಾರ್ಥಿಗಳು ಅಥವಾ ಪೋಷಕರಿಗೆ ಯಾವುದೇ ರೀತಿಯ ಸ್ಕ್ರೀನಿಂಗ್ ಪರೀಕ್ಷೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ಆಗಸ್ಟ್ 3ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಈ ಕುರಿತು ಸೂಚನೆ ನೀಡಲಾಗಿದ್ದು, ಆಗಸ್ಟ್ 7ರಂದು ಹೊರಡಿಸಿರುವ ತಿದ್ದುಪತ್ರದಲ್ಲಿ ಶೈಕ್ಷಣಿಕ ವರ್ಷವನ್ನು 2024-25ರ ಬದಲಿಗೆ 2026-27 ಎಂದು ತಿದ್ದಲಾಗಿದೆ.
ಕ್ಯಾಪಿಟೇಶನ್ ಶುಲ್ಕ ವಸೂಲಿ ಮಾಡುವಂತಿಲ್ಲ
ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 13ರ ಪ್ರಕಾರ, ಯಾವುದೇ ಶಾಲೆ ಅಥವಾ ವ್ಯಕ್ತಿ ವಿದ್ಯಾರ್ಥಿಯನ್ನು ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಶಾಲೆ ನಿಗದಿಪಡಿಸಿರುವ ಶುಲ್ಕವನ್ನು ಹೊರತುಪಡಿಸಿ ಕ್ಯಾಪಿಟೇಶನ್ ಶುಲ್ಕದ ಹೆಸರಿನಲ್ಲಿ ದೇಣಿಗೆ ಅಥವಾ ಹೆಚ್ಚುವರಿ ಹಣ ಪಡೆಯುವಂತಿಲ್ಲ.ಅಲ್ಲದೆ, ವಿದ್ಯಾರ್ಥಿ, ಪೋಷಕರು ಅಥವಾ ಪಾಲಕರಿಗೆ ಯಾವುದೇ ರೀತಿಯ ಸ್ಕ್ರೀನಿಂಗ್ ಪ್ರಕ್ರಿಯೆ ನಡೆಸುವಂತಿಲ್ಲ ಎಂದು ಇಲಾಖೆ ತಿಳಿಸಿದೆ.
ನಿಯಮ ಉಲ್ಲಂಘಿಸಿದರೆ ಭಾರೀ ದಂಡ
ಕ್ಯಾಪಿಟೇಶನ್ ಶುಲ್ಕ ವಸೂಲಿ ಮಾಡಿರುವುದು ಕಂಡುಬಂದರೆ, ವಸೂಲಿ ಮಾಡಿದ ಶುಲ್ಕದ 10 ಪಟ್ಟು ವರೆಗೆ ದಂಡ ವಿಧಿಸಬಹುದಾಗಿದೆ.ಇನ್ನು ವಿದ್ಯಾರ್ಥಿಗಳ ಮೇಲೆ ಸ್ಕ್ರೀನಿಂಗ್ ಪ್ರಕ್ರಿಯೆ ನಡೆಸಿದರೆ, ಮೊದಲ ಉಲ್ಲಂಘನೆಗೆ ₹25,000 ವರೆಗೆ ದಂಡ ಹಾಗೂ ನಂತರದ ಪ್ರತಿಯೊಂದು ಉಲ್ಲಂಘನೆಗೆ ₹50,000 ವರೆಗೆ ದಂಡ ವಿಧಿಸಲು ಅವಕಾಶವಿದೆ.
ಶಾಲಾ ಶುಲ್ಕದ ವಿವರ ಪ್ರಕಟಿಸುವುದು ಕಡ್ಡಾಯ
ಖಾಸಗಿ ಶಾಲೆಗಳು ತಾವು ನಿಗದಿಪಡಿಸಿರುವ ಶುಲ್ಕದ ವಿವರಗಳನ್ನು ಶಾಲೆಯ ಜಾಲತಾಣ, ಶಾಲಾ ಸೂಚನಾ ಫಲಕ ಹಾಗೂ ಇಲಾಖೆಯ ಜಾಲತಾಣದಲ್ಲಿ (SATS) ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
ದೂರು ಬಂದರೆ ಕ್ರಮ
ತಮ್ಮ ವ್ಯಾಪ್ತಿಯ ಖಾಸಗಿ ಶಾಲೆಗಳು ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 2(b) ಮತ್ತು ಸೆಕ್ಷನ್ 13(1) ಉಲ್ಲಂಘಿಸಿರುವ ಬಗ್ಗೆ ದೂರುಗಳು ಬಂದರೆ, ಸಂಬಂಧಪಟ್ಟ ಅಧಿಕಾರಿಗಳು ಸೆಕ್ಷನ್ 13(2)(a), 13(2)(b) ಹಾಗೂ ಕರ್ನಾಟಕ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಹಕ್ಕು ನಿಯಮಗಳು-2012ರ ನಿಯಮ 23ರಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಒಟ್ಟಿನಲ್ಲಿ, ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಹಾಗೂ ವಿದ್ಯಾರ್ಥಿಗಳ ಸ್ಕ್ರೀನಿಂಗ್‌ಗೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.



