HomeLatest NewsUPI ವಹಿವಾಟಿಗೆ ಶುಲ್ಕ ಬರಲಿದೆಯೇ..? ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತದೆಯೇ ? ಕೇಂದ್ರದಿಂದ ಮಹತ್ವದ ಸ್ಪಷ್ಟನೆ

UPI ವಹಿವಾಟಿಗೆ ಶುಲ್ಕ ಬರಲಿದೆಯೇ..? ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತದೆಯೇ ? ಕೇಂದ್ರದಿಂದ ಮಹತ್ವದ ಸ್ಪಷ್ಟನೆ

ನವದೆಹಲಿ: ಭಾರತದಲ್ಲಿ ಡಿಜಿಟಲ್ ಪಾವತಿಗಳ ಕ್ರಾಂತಿಗೆ ಕಾರಣವಾದ ಯುಪಿಐ (UPI) ಮತ್ತು ರೂಪೇ (RuPay) ವಹಿವಾಟುಗಳ ಮೇಲಿನ ಶುಲ್ಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಂಡಿಸಿರುವ ‘ತೆರಿಗೆ ಹಾಗೂ ಇತರೆ ಕಾನೂನುಗಳ ತಿದ್ದುಪಡಿ ಮಸೂದೆ’ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ, ಪಾವತಿ ಮತ್ತು ಸೆಟ್ಲ್‌ಮೆಂಟ್ ಕಾಯ್ದೆಯ ಸೆಕ್ಷನ್ 10Aಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ವಿವಾದ ಏನು?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಲ್ಲಿಯವರೆಗೆ ಯುಪಿಐ ಹಾಗೂ ರೂಪೇ ಕಾರ್ಡ್ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಎಂಬ ಶುಲ್ಕವನ್ನು ವ್ಯಾಪಾರಿಗಳಿಂದ ವಸೂಲಿ ಮಾಡಲಾಗುತ್ತಿರಲಿಲ್ಲ. ಅಂದರೆ ಇದು ಶೂನ್ಯ MDR ವ್ಯವಸ್ಥೆಯಾಗಿತ್ತು.ಆದರೆ ಹೊಸ ಮಸೂದೆಯಲ್ಲಿ ಈ ನಿಯಮವನ್ನು ತಿದ್ದುಪಡಿ ಮಾಡಿ, ಭವಿಷ್ಯದ ಅಗತ್ಯಕ್ಕೆ ಅನುಗುಣವಾಗಿ ಶುಲ್ಕ ವಿಧಿಸುವ ಕುರಿತು ಅಧಿಸೂಚನೆ ಹೊರಡಿಸುವ ಅಧಿಕಾರವನ್ನು ಸರ್ಕಾರದ ಬಳಿ ಉಳಿಸಿಕೊಳ್ಳುವ ಪ್ರಸ್ತಾಪ ಮಾಡಲಾಗಿದೆ.

ಜೈರಾಮ್ ರಮೇಶ್ ಆರೋಪವೇನು?

ಈ ನಿರ್ಧಾರವನ್ನು ವಿರೋಧಿಸಿದ ಜೈರಾಮ್ ರಮೇಶ್, ಉಚಿತ ಡಿಜಿಟಲ್ ಪಾವತಿ ವ್ಯವಸ್ಥೆಗೆ ಇದ್ದ ಕಾನೂನುಬದ್ಧ ರಕ್ಷಣೆಯನ್ನು ಸರ್ಕಾರ ತೆಗೆದುಹಾಕುತ್ತಿದೆ ಎಂದು ಆರೋಪಿಸಿದರು. ಇದರಿಂದ ಪರೋಕ್ಷವಾಗಿ ಗ್ರಾಹಕರ ಮೇಲೆಯೇ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.2025–26ನೇ ಸಾಲಿನ ಆರ್‌ಬಿಐ ಹೆಚ್ಚುವರಿ ಲಾಭದ ₹2.86 ಲಕ್ಷ ಕೋಟಿ ಮೊತ್ತವನ್ನು ಬಳಸಿಕೊಂಡು ಯುಪಿಐ ಮೂಲಸೌಕರ್ಯವನ್ನು ಉಚಿತವಾಗಿಯೇ ನಿರ್ವಹಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಯುಪಿಐ ವ್ಯವಸ್ಥೆ ಉಳಿಸಿಕೊಳ್ಳಲು ಶುಲ್ಕ ವಿಧಿಸುವುದೇ ಏಕೈಕ ಮಾರ್ಗ ಎಂಬ ಕೇಂದ್ರದ ವಾದ ತಪ್ಪು ಎಂದು ಹೇಳಿದ ಅವರು, ಅಮೆರಿಕದ ಒತ್ತಡದ ಕಾರಣದಿಂದಲೇ ಈ ಬದಲಾವಣೆ ತರಲಾಗುತ್ತಿದೆ ಎಂದೂ ಆರೋಪಿಸಿದರು. USTR 2026 ವರದಿಯಲ್ಲಿ ಯುಪಿಐ ಮತ್ತು ರೂಪೇ ಸೇವೆಗಳು ಅಮೆರಿಕದ ವೀಸಾ ಹಾಗೂ ಮಾಸ್ಟರ್‌ಕಾರ್ಡ್ ಕಂಪನಿಗಳಿಗೆ ಹೊಡೆತ ನೀಡುತ್ತಿವೆ ಎಂದು ಉಲ್ಲೇಖಿಸಿರುವುದನ್ನು ಅವರು ನೆನಪಿಸಿದರು.

ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಜೈರಾಮ್ ರಮೇಶ್ ಅವರ ಆರೋಪಗಳನ್ನು ತಳ್ಳಿಹಾಕಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಮಸೂದೆಯಿಂದ ಸಾಮಾನ್ಯ ಯುಪಿಐ ಬಳಕೆದಾರರ ಮೇಲೆ ಯಾವುದೇ ಹೆಚ್ಚುವರಿ ಶುಲ್ಕ ಅಥವಾ ಭಾರ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.MDR ಶುಲ್ಕವು ಕೇವಲ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಸಾಮಾನ್ಯ ಗ್ರಾಹಕರು ಮಾಡುವ ಯುಪಿಐ ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಅವರು ತಿಳಿಸಿದರು.

ಬ್ಯಾಂಕುಗಳು ಮತ್ತು ಫಿನ್‌ಟೆಕ್ ಸಂಸ್ಥೆಗಳು ತಮ್ಮ ಜಾಲತಾಣದ ಭದ್ರತೆ, ತಂತ್ರಜ್ಞಾನ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆ ಮಾಡುವ ಅಗತ್ಯವಿದ್ದು, ಈ ಪ್ರಸ್ತಾವನೆ ಅಂತಿಮವಾಗಿ ಗ್ರಾಹಕರಿಗೂ ಲಾಭವಾಗಲಿದೆ ಎಂದು ಹೇಳಿದರು.ಇನ್ನೂ ಈ ಶುಲ್ಕ ಜಾರಿಗೆ ಸಂಬಂಧಿಸಿದಂತೆ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದ ಬಳಿಕ NPCI ನೇತೃತ್ವದ ಸ್ಟೀರಿಂಗ್ ಸಮಿತಿ ಈ ಕುರಿತು ಅಂತಿಮ ಮಾರ್ಗಸೂಚಿ ಪ್ರಕಟಿಸಲಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ

ಈ ಬೆಳವಣಿಗೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.ಕೆಲವರು, “ಮುಂದಿನ ದಿನಗಳಲ್ಲಿ ಯುಪಿಐ ವಹಿವಾಟುಗಳ ಮೇಲೂ ಶುಲ್ಕ ಅಥವಾ ತೆರಿಗೆ ವಿಧಿಸುವ ಸಾಧ್ಯತೆಯಿದೆ” ಎಂದು ಆತಂಕ ವ್ಯಕ್ತಪಡಿಸಿದರೆ, ಮತ್ತೊಬ್ಬರು “ಭಾರತೀಯ ಡಿಜಿಟಲ್ ಪಾವತಿ ವ್ಯವಸ್ಥೆ ಬಲವಾಗಲು ವ್ಯಾಪಾರಿಗಳಿಂದ ಸೂಕ್ತ MDR ವಸೂಲಿ ಮಾಡುವುದು ಅಗತ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು, “ವ್ಯಾಪಾರಿಗಳ ಮೇಲೆ ಶುಲ್ಕ ವಿಧಿಸಿದರೆ ಅವರು ವಸ್ತುಗಳ ಬೆಲೆ ಹೆಚ್ಚಿಸುತ್ತಾರೆ. ಅಂತಿಮವಾಗಿ ಅದರ ಹೊರೆ ಗ್ರಾಹಕರ ಮೇಲೇ ಬೀಳುತ್ತದೆ” ಎಂದು ಸರ್ಕಾರದ ಕ್ರಮದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular