ಟೋಕಿಯೊ: ಪ್ರಕೃತಿಯ ಆರ್ಭಟಕ್ಕೆ ಜಪಾನ್ ಮತ್ತೊಮ್ಮೆ ತತ್ತರಿಸಿದೆ. ‘ಡಾಲ್ಫಿನ್’ (Dolphin) ಹೆಸರಿನ ಭೀಕರ ಕ್ಯಾಟಗರಿ-1 ಚಂಡಮಾರುತ ದೇಶದ ನೈಋತ್ಯ ಭಾಗದತ್ತ ವೇಗವಾಗಿ ಮುನ್ನುಗ್ಗುತ್ತಿದ್ದು, ಭಾರೀ ಹಾನಿಯ ಆತಂಕ ಎದುರಾಗಿದೆ.
ಗಂಟೆಗೆ ಸುಮಾರು 198 ಕಿ.ಮೀ. ವೇಗದ ಗಾಳಿಯೊಂದಿಗೆ ಚಂಡಮಾರುತ ಅಬ್ಬರಿಸುತ್ತಿದ್ದು, ಸಮುದ್ರದಲ್ಲಿ ಭಾರೀ ಅಲೆಗಳು ಎದ್ದೇಳುತ್ತಿವೆ. ಚಂಡಮಾರುತದ ಭೀತಿಯಿಂದ ಎಚ್ಚೆತ್ತಿರುವ ಜಪಾನ್ ಸರ್ಕಾರ ಜನರ ಸುರಕ್ಷತೆಗಾಗಿ ತುರ್ತು ಕ್ರಮಗಳನ್ನು ಕೈಗೊಂಡಿದೆ.ಕಾಗೋಶಿಮಾ ಹಾಗೂ ಒಕಿನಾವಾ ಕರಾವಳಿ ಪ್ರದೇಶಗಳು ಚಂಡಮಾರುತದಿಂದ ಹೆಚ್ಚು ತತ್ತರಿಸುವ ಸಾಧ್ಯತೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 2.60 ಲಕ್ಷ ಜನರಿಗೆ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ತಾತ್ಕಾಲಿಕ ಪುನರ್ವಸತಿ ಕೇಂದ್ರಗಳನ್ನು ಕೂಡ ಸಿದ್ಧಪಡಿಸಲಾಗಿದೆ. ಭಾರೀ ಗಾಳಿಯಿಂದ ಮನೆಗಳು ಹಾಗೂ ಕಟ್ಟಡಗಳು ಕುಸಿಯುವ ಅಪಾಯವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
500ಕ್ಕೂ ಹೆಚ್ಚು ವಿಮಾನಗಳು ರದ್ದು.. ಟೊಯೋಟಾದ 9 ಘಟಕಗಳ ಕಾರ್ಯ ಸ್ಥಗಿತ
ಚಂಡಮಾರುತದ ಪರಿಣಾಮ ಸಾರಿಗೆ ಮತ್ತು ಕೈಗಾರಿಕಾ ಕ್ಷೇತ್ರಗಳ ಮೇಲೂ ತೀವ್ರವಾಗಿ ಬಿದ್ದಿದೆ. ಗುರುವಾರ ಮತ್ತು ಶುಕ್ರವಾರ ನಿಗದಿಯಾಗಿದ್ದ 500ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ವಿಮಾನಯಾನ ಸಂಸ್ಥೆಗಳು ರದ್ದುಗೊಳಿಸಿವೆ.
ಜಪಾನ್ನ ಪ್ರಮುಖ ವಾಹನ ತಯಾರಿಕಾ ಸಂಸ್ಥೆ ಟೊಯೋಟಾ ತನ್ನ ಉದ್ಯೋಗಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು 9 ಉತ್ಪಾದನಾ ಘಟಕಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ. ಹಲವೆಡೆ ರೈಲು ಹಾಗೂ ಬಸ್ ಸಂಚಾರವೂ ಅಸ್ತವ್ಯಸ್ತಗೊಂಡಿದೆ.
ಭೂಕಂಪದ ಗಾಯದ ಮೇಲೆ ಚಂಡಮಾರುತದ ಹೊಡೆತ
ಇತ್ತೀಚೆಗೆ ಸಂಭವಿಸಿದ 7.1 ತೀವ್ರತೆಯ ಭೂಕಂಪದಿಂದ ಕುಮಮೋಟೋ ಪ್ರದೇಶ ತೀವ್ರ ಹಾನಿಗೊಳಗಾಗಿತ್ತು. ಮನೆ ಕಳೆದುಕೊಂಡ ಸುಮಾರು 6,700 ಮಂದಿ ಈಗಾಗಲೇ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಇದೀಗ ಇದೇ ಪ್ರದೇಶದತ್ತ ಡಾಲ್ಫಿನ್ ಚಂಡಮಾರುತ ದೌಡಾಯಿಸುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಒಂದೆಡೆ ನಿರಂತರ ಮಳೆ ಹಾಗೂ ಪ್ರವಾಹದ ಭೀತಿ ಎದುರಾಗಿದ್ದರೆ, ಮತ್ತೊಂದೆಡೆ ಕೆಲವು ಪ್ರದೇಶಗಳಲ್ಲಿ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದ್ದು, ಬಿಸಿಗಾಳಿಯ ಅಪಾಯವೂ ಇದೆ. ಒಂದೇ ಸಮಯದಲ್ಲಿ ಎರಡು ಪ್ರಕೃತಿ ವಿಕೋಪಗಳು ಎದುರಾಗಿರುವುದರಿಂದ ಜಪಾನ್ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

