ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ರಾಜೀನಾಮೆ ನೀಡುವಂತೆ ಆಡಳಿತಾರೂಢ ಕಾಂಗ್ರೆಸ್ ನಿಂದ ಒತ್ತಡ ಹೆಚ್ಚುತ್ತಿದೆ. ಈ ನಡುವೆ ಕಾಂಗ್ರೆಸ್ ನಾಯಕರು ಇಂದು ಕಾಂಗ್ರೆಸ್ ಅವಿಶ್ವಾಸ ನಿರ್ಣಯ ನಿಲುವಳಿ ನೋಟಿಸ್ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಸವರಾಜ್ ಹೊರಟ್ಟಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಭೇಟಿ ವೇಳೆ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸದಂತೆ ಹಾಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಆದರೆ ಕೆಲ ಸಮಯಾವಕಾಶ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಆಗಸ್ಟ್ 14ರಂದು ರಾಜೀನಾಮೆ ನೀಡೋದಾಗಿ ಹೇಳಿದ್ದ ಹೊರಟ್ಟಿ, ಇದೀಗ ರಾಜೀನಾಮೆಗೆ ಸಮಯಾವಕಾಶ ಬೇಕು ಎಂದಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಭೇಟಿ ಬಳಿಕ ಬಸವರಾಜ್ ಹೊರಟ್ಟಿ ಅವರು ಅಸಮಾಧಾನದಿಂದಲೇ ಸಿಎಂ ಮನೆಯಿಂದ ಹೊರಬಂದ ಘಟನೆ ನಡೆದಿದೆ. ಸಿಎಂ ಕಳುಹಿಸಲು ಬಂದರೂ ಹಿಂತಿರುಗಿ ನೋಡದೇ ತಮ್ಮ ಕಾರೆಲ್ಲಿ ಎಂದು ಕೇಳುತ್ತಾ ಮುಂದೆ ಸಾಗಿದರು.
ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ವಿಚಾರವಾಗಿ ಮಾತನಾಡಿದ ಬಸವರಾಜ ಹೊರಟ್ಟಿ, ಮೊನ್ನೆ ನಾನು ಏನು ಹೇಳಿದ್ದೇನೋ ಅದಕ್ಕೆ ಬದ್ಧನಿದ್ದೇನೆ. ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ರೆ ಮಂಡಿಸಲಿ. ಕಾನೂನು ಪ್ರಕಾರ ಏನು ಬೇಕಾದರೂ ಮಾಡಲಿ ಎಂದು ತಿಳಿಸಿದರು.

