ಮುಂಬೈನಲ್ಲಿ ಇತ್ತೀಚೆಗೆ ನಡೆದ 2026ರ ಮರಾಠಿ ಫಿಲ್ಮ್ ಫೇರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ತಮ್ಮ ಸಾಂಪ್ರದಾಯಿಕ ಉಡುಗೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಗ್ಲಾಮರಸ್ ಗೌನ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಈ ಬಾರಿ ಪಕ್ಕಾ ದೇಸಿ ಶೈಲಿಯ ಬನಾರಸಿ ಸೀರೆ ಹಾಗೂ ಚಿನ್ನದ ಆಭರಣಗಳನ್ನು ಧರಿಸಿ ಹೆಜ್ಜೆ ಹಾಕಿದ್ದು ನೋಡುಗರ ಕಣ್ಮನ ಸೆಳೆಯುವಂತಿತ್ತು. ಸಾಂಪ್ರದಾಯಿಕ ಉಡುಗೆಗಳು ಎಂದಿಗೂ ಫ್ಯಾಷನ್ ಟ್ರೆಂಡ್ ನಿಂದ ಹೊರಗುಳಿಯುವುದಿಲ್ಲ ಎಂಬುದನ್ನು ನಟಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿರುವ ಈ ಸೀರೆ ಅತ್ಯಂತ ಆಕರ್ಷಕವಾಗಿತ್ತು. ನೇರಳೆ ಬಣ್ಣದ ಬನಾರಸಿ ಸೀರೆಗೆ ಬೆಳ್ಳಿಯ ಜರಿ ಕೆಲಸ ಮಾಡಲಾಗಿದ್ದು ನಿಯಾನ್ ಗುಲಾಬಿ ಬಣ್ಣದ ಬಾರ್ಡರ್ ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು. ಸೀರೆಯ ಸೆರಗಿನಲ್ಲಿ ನೈಸರ್ಗಿಕ ವಿನ್ಯಾಸಗಳು ಎದ್ದು ಕಾಣುತ್ತಿದ್ದು ಇಡೀ ಉಡುಗೆಗೆ ಒಂದು ರಾಯಲ್ ಕಳೆ ನೀಡಿದೆ.
ಸಾಂಪ್ರದಾಯಿಕ ಸೀರೆಗೆ ಮಾಡರ್ನ್ ಟಚ್ ನೀಡುವ ಸಲುವಾಗಿ ಅನನ್ಯಾ ಸ್ಟ್ರಾಪ್ ಲೆಸ್ ಟ್ಯೂಬ್ ಬ್ಲೌಸ್ ಧರಿಸಿದ್ದರು. ಸೀರೆಯ ನೆರಿಗೆಗಳನ್ನು ಅಚ್ಚುಕಟ್ಟಾಗಿ ಹೊಂದಿಸಿ ಸೆರಗನ್ನು ಒಂದು ಕಡೆಗೆ ಮಾತ್ರ ಪಿನ್ ಮಾಡಲಾಗಿತ್ತು. ನೆಲಕ್ಕೆ ತಾಗುವಷ್ಟು ಉದ್ದವಾಗಿ ಬಿಟ್ಟಿದ್ದ ಸೆರಗು ಸೀರೆಯ ವಿನ್ಯಾಸವನ್ನು ಸಂಪೂರ್ಣವಾಗಿ ಹೈಲೈಟ್ ಮಾಡುವಂತಿತ್ತು. ಅವರ ಈ ಇಂಡೋ ವೆಸ್ಟರ್ನ್ ಶೈಲಿಯ ಉಡುಗೆ ಯುವಜನತೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಈ ಉಡುಗೆಗೆ ತಕ್ಕಂತೆ ಕುಂದನ್ ಹರಳುಗಳಿಂದ ಕೂಡಿದ ಚಿನ್ನದ ಚೋಕರ್ ನೆಕ್ಲೆಸ್ ಅನ್ನು ನಟಿ ಧರಿಸಿದ್ದರು. ಇದು ಅವರ ಒಟ್ಟಾರೆ ಲುಕ್ ನ ಪ್ರಮುಖ ಆಕರ್ಷಣೆಯಾಗಿತ್ತು. ಇದರ ಜೊತೆಗೆ ಮ್ಯಾಚಿಂಗ್ ಬ್ರೇಸ್ಲೆಟ್ ಕಿವಿಯೋಲೆ ಹಾಗೂ ಉಂಗುರಗಳನ್ನು ಸಹ ಬಳಸಿದ್ದರು. ಸೀರೆ ಹಾಗೂ ಆಭರಣಗಳು ಎದ್ದು ಕಾಣುವಂತೆ ಮಾಡಲು ತಮ್ಮ ಮೇಕಪ್ ಅನ್ನು ಅತ್ಯಂತ ಸರಳವಾಗಿಟ್ಟುಕೊಂಡಿದ್ದರು. ಹೊಳೆಯುವ ತ್ವಚೆ ಹಾಗೂ ನ್ಯೂಡ್ ಲಿಪ್ ಸ್ಟಿಕ್ ಮೂಲಕ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದರು.

