ಅಯೋಧ್ಯೆ: ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ದೇಶದ ಮೂಲೆ ಮೂಲೆಗಳಿಂದ ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ವೃದ್ಧರು, ಪುಟ್ಟ ಮಕ್ಕಳು ಹಾಗೂ ತಾಯಂದಿರಿಗೆ ಶ್ರೀರಾಮ ಜನ್ಮಭೂಮಿ ದೇವಾಲಯ ಟ್ರಸ್ಟ್ ‘ಸುಗಮ ದರ್ಶನ’ ನೀತಿ ಜಾರಿಗೆ ತಂದಿದೆ.
ಭಕ್ತರ ಅನುಕೂಲಕ್ಕಾಗಿ ಶ್ರೀರಾಮ ಜನ್ಮಭೂಮಿ ದೇವಾಲಯ ಟ್ರಸ್ಟ್ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವೃದ್ಧರು, ಪುಟ್ಟ ಮಕ್ಕಳಿರುವ ತಾಯಂದಿರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಅಡೆತಡೆಯಿಲ್ಲದೆ ಶ್ರೀರಾಮನ ದರ್ಶನ ಕಲ್ಪಿಸಲು ವಿಶೇಷ ‘ಸುಗಮ ದರ್ಶನ’ ನೀತಿಯನ್ನು ಜಾರಿಗೆ ತರಲಾಗಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಸುದೀರ್ಘ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಭಕ್ತರ ಶ್ರಮ ತಪ್ಪಲಿದ್ದು, ಎಲ್ಲರಿಗೂ ಶಾಂತಿಯುತ ಹಾಗೂ ಆರಾಮದಾಯಕವಾಗಿ ನೇರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಇನ್ಮುಂದೆ ಆನ್‌ಲೈನ್‌ನಲ್ಲಿ ಅಥವಾ ಸಾಮಾನ್ಯ ಸಾಲಿನಲ್ಲಿ ನಿಂತು ಮುಂಗಡ ಅನುಮತಿ ಪಡೆಯುವ ಅಗತ್ಯವಿಲ್ಲ. ದೇವಾಲಯದ ಆವರಣದಲ್ಲಿರುವ ‘ಸುಗಮ ದರ್ಶನ ಕೌಂಟರ್’ಗೆ ಭೇಟಿ ನೀಡಿ ತಮ್ಮ ವಯಸ್ಸಿನ ಪರಿಶೀಲನೆಗಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಥವಾ ಯಾವುದೇ ಸರ್ಕಾರಿ ಗುರುತಿನ ಚೀಟಿಯನ್ನು ತೋರಿಸಿದರೆ ಸಾಕು, ಕೇವಲ 10 ನಿಮಿಷಗಳಲ್ಲಿ ಅವರಿಗೆ ಪಾಸ್ ನೀಡಲಾಗುತ್ತದೆ. ಈ ಮೂಲಕ ಅವರು ದೀರ್ಘ ಸಮಯ ಕಾಯದೆ ಸುಲಭವಾಗಿ ದರ್ಶನ ಪಡೆಯಬಹುದು.
ಹಿರಿಯ ನಾಗರಿಕರು ಒಂಟಿಯಾಗಿ ಪ್ರಯಾಣಿಸಲು ಅಥವಾ ನಡೆಯಲು ಕಷ್ಟಪಡಬೇಕಾಗಬಹುದು ಎಂಬುದನ್ನು ದೇವಾಲಯ ಟ್ರಸ್ಟ್ ವಿಶೇಷವಾಗಿ ಪರಿಗಣಿಸಿದೆ. ಆದ್ದರಿಂದ ಸುಗಮ ದರ್ಶನ ಸೌಲಭ್ಯದ ಅಡಿಯಲ್ಲಿ ವೃದ್ಧರ ಜೊತೆಯಲ್ಲಿರುವ ಒಬ್ಬ ವ್ಯಕ್ತಿಗೆ ಅಥವಾ ಸಹಾಯಕರಿಗೆ ಅವರೊಂದಿಗೆ ದೇವಾಲಯದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಈ ವ್ಯವಸ್ಥೆಯು ಹಿರಿಯ ಭಕ್ತರು ಸಂಪೂರ್ಣ ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ವಾತಾವರಣದಲ್ಲಿ ದೇವರ ದರ್ಶನ ಪಡೆಯಲು ಸಹಾಯ ಮಾಡುತ್ತದೆ.
ಮೂರು ವರ್ಷದೊಳಗಿನ ಕಂದಮ್ಮಗಳೊಂದಿಗೆ ಬರುವ ತಾಯಂದಿರಿಗೆ ದೇವಾಲಯ ಟ್ರಸ್ಟ್ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದೆ. ಅವರು ಸಾಮಾನ್ಯ ಕ್ಯೂನಲ್ಲಿ ಗಂಟೆಗಟ್ಟಲೆ ನಿಲ್ಲುವ ಅಗತ್ಯವಿಲ್ಲದೆ, ನೇರವಾಗಿ ‘ಸುಗಮ ದರ್ಶನಂ ಕೌಂಟರ್’ನಲ್ಲಿ ಪಾಸ್ ಪಡೆದುಕೊಂಡು ದೇವರ ದರ್ಶನಕ್ಕೆ ತೆರಳಬಹುದು. ಇದು ಚಿಕ್ಕ ಮಕ್ಕಳನ್ನು ಕರೆದುಕೊಂಡು ಬರುವ ಮಹಿಳೆಯರಿಗೆ ಅನಗತ್ಯ ಶ್ರಮ ಹಾಗೂ ತೊಂದರೆಯಾಗುವುದನ್ನು ತಪ್ಪಿಸಲಿದೆ.
ಹತ್ತು ವರ್ಷದೊಳಗಿನ ಮಕ್ಕಳಿಗೆ ದೇವಾಲಯ ಪ್ರವೇಶಿಸಲು ಯಾವುದೇ ವಿಶೇಷ ಪಾಸ್ ಅಥವಾ ಶುಲ್ಕದ ಅಗತ್ಯವಿರುವುದಿಲ್ಲ. ಅವರು ಸಂಪೂರ್ಣವಾಗಿ ಉಚಿತವಾಗಿ ನೇರವಾಗಿ ದೇವಾಲಯವನ್ನು ಪ್ರವೇಶಿಸಬಹುದು ಮತ್ತು ತಮ್ಮ ಪೋಷಕರೊಂದಿಗೆ ಶ್ರೀರಾಮನ ದರ್ಶನ ಪಡೆಯಬಹುದು. ಮಕ್ಕಳೊಂದಿಗೆ ಆಗಮಿಸುವ ಕುಟುಂಬಗಳಿಗೆ ದರ್ಶನ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೇವಾಲಯ ಟ್ರಸ್ಟ್‌ನ ಈ ಮಾನವೀಯ ಕ್ರಮಕ್ಕೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

