ನವದೆಹಲಿ: ದೇಶದ ಇಂಧನ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ಈಶಾನ್ಯ ರಾಜ್ಯಗಳ ರಸ್ತೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
ದೇಶಾದ್ಯಂತ ಸಂಕುಚಿತ ಜೈವ ಅನಿಲ (Compressed Bio Gas – CBG) ಉತ್ಪಾದನೆಯನ್ನು ಉತ್ತೇಜಿಸಲು ₹23,731 ಕೋಟಿ ವೆಚ್ಚದ ‘ಗೋಬರ್‌ಧನ್ (GOBARdhan)’ ರಾಷ್ಟ್ರೀಯ ಸಮಗ್ರ ಯೋಜನೆಗೆ ಹಾಗೂ ಅಸ್ಸಾಂನಲ್ಲಿ ಗುವಾಹಟಿ–ತೇಜ್‌ಪುರ ನಾಲ್ಕು ಪಥಗಳ ನಿಯಂತ್ರಿತ ಪ್ರವೇಶ (Access Controlled) ಕಾರಿಡಾರ್ ಅಭಿವೃದ್ಧಿಗೆ ₹8,970.20 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಎರಡೂ ಯೋಜನೆಗಳ ಒಟ್ಟು ಮೌಲ್ಯ ಸುಮಾರು ₹32,701 ಕೋಟಿ.
ಸಿಬಿಜಿ ಉತ್ಪಾದನೆಗೆ ಭಾರೀ ಉತ್ತೇಜನ
‘ಗ್ಯಾಲ್ವನೈಸಿಂಗ್ ಆರ್ಗಾನಿಕ್ ಬಯೋ-ಅಗ್ರೋ ರಿಸೋರ್ಸಸ್ ಧನ್ (GOBARdhan)’ ಯೋಜನೆಯನ್ನು ರಾಷ್ಟ್ರವ್ಯಾಪಿಯಾಗಿ ಸಮಗ್ರವಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ₹23,731 ಕೋಟಿ ಅನುದಾನ ಮೀಸಲಿಡಲಾಗಿದೆ.ಈ ಯೋಜನೆಯಡಿ ಸಾವಯವ ತ್ಯಾಜ್ಯ, ಜಾನುವಾರುಗಳ ಸಗಣಿ, ಕೃಷಿ ಅವಶೇಷಗಳು, ಅಡುಗೆಮನೆ ತ್ಯಾಜ್ಯ ಸೇರಿದಂತೆ ವಿವಿಧ ಜೈವ ತ್ಯಾಜ್ಯಗಳನ್ನು ಬಳಸಿ ಮೊದಲು ಬಯೋಗ್ಯಾಸ್, ನಂತರ ಸಂಕುಚಿತ ಜೈವ ಅನಿಲ (CBG) ಉತ್ಪಾದಿಸಲಾಗುತ್ತದೆ.
ದೇಶೀಯ ಸಿಬಿಜಿ ಉತ್ಪಾದನೆಯನ್ನು ಈಗಿನ ಮಟ್ಟಕ್ಕಿಂತ ಸುಮಾರು 10 ಪಟ್ಟು ಹೆಚ್ಚಿಸಿ, ಆಮದು ಮಾಡಿಕೊಳ್ಳುವ ನೈಸರ್ಗಿಕ ಅನಿಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದೆ. ಇದರಿಂದ ತ್ಯಾಜ್ಯ ನಿರ್ವಹಣೆ, ಪರ್ಯಾಯ ಇಂಧನ ಉತ್ಪಾದನೆ, ಗ್ರಾಮೀಣ ಆರ್ಥಿಕತೆ, ರೈತರ ಆದಾಯ ಮತ್ತು ಉದ್ಯೋಗಾವಕಾಶಗಳಿಗೆ ಉತ್ತೇಜನ ಸಿಗಲಿದೆ.
ಗೋಬರ್‌ಧನ್ ಯೋಜನೆ 2018ರಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಅಡಿಯಲ್ಲಿ ಆರಂಭಗೊಂಡಿತ್ತು. ಜೈವ ತ್ಯಾಜ್ಯವನ್ನು ಬಯೋಗ್ಯಾಸ್ ಮತ್ತು ಬಯೋ-ಸ್ಲರಿಯಾಗಿ ಪರಿವರ್ತಿಸಿ ಗ್ರಾಮೀಣ ಸ್ವಚ್ಛತೆ ಹೆಚ್ಚಿಸುವುದರ ಜೊತೆಗೆ ತ್ಯಾಜ್ಯವನ್ನು ಮೌಲ್ಯಯುತ ಸಂಪನ್ಮೂಲವನ್ನಾಗಿ ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಅಸ್ಸಾಂನಲ್ಲಿ 135.87 ಕಿ.ಮೀ. ನಾಲ್ಕು ಪಥಗಳ ಕಾರಿಡಾರ್
ಅಸ್ಸಾಂ ರಾಜ್ಯದ ರಾಷ್ಟ್ರೀಯ ಹೆದ್ದಾರಿ-15ರಲ್ಲಿ 135.871 ಕಿ.ಮೀ. ಉದ್ದದ ಗುವಾಹಟಿ–ತೇಜ್‌ಪುರ ಕಾರಿಡಾರ್ ಅನ್ನು ನಾಲ್ಕು ಪಥಗಳ ನಿಯಂತ್ರಿತ ಪ್ರವೇಶದ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.ಈ ಯೋಜನೆಯನ್ನು ಬಿಲ್ಡ್-ಆಪರೇಟ್-ಟ್ರಾನ್ಸ್‌ಫರ್ (BOT) ಟೋಲ್ ಮಾದರಿಯಲ್ಲಿ ಸುಮಾರು ₹8,970.20 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.
ಯೋಜನೆಯಡಿ:
58.7 ಕಿ.ಮೀ. ಉದ್ದದ 5 ಪ್ರಮುಖ ಬೈಪಾಸ್‌ಗಳು
15 ಪ್ರಮುಖ ಸೇತುವೆಗಳು
30 ಸಣ್ಣ ಸೇತುವೆಗಳು
19 ಫ್ಲೈಓವರ್‌ಗಳು
46 ಅಂಡರ್‌ಪಾಸ್‌ಗಳು
ಸುಮಾರು 210 ಕಿ.ಮೀ. ಸರ್ವೀಸ್ ರಸ್ತೆಗಳು ನಿರ್ಮಾಣವಾಗಲಿವೆ.
ಇದರ ಜೊತೆಗೆ ತೇಜ್‌ಪುರ ಬೈಪಾಸ್‌ನಲ್ಲಿ 4.9 ಕಿ.ಮೀ. ಉದ್ದದ ತುರ್ತು ವಿಮಾನ ಇಳಿಸುವ ಸೌಲಭ್ಯ (Emergency Landing Facility – ELF) ನಿರ್ಮಿಸಲಾಗುತ್ತದೆ. ಈ ಸೌಲಭ್ಯವನ್ನು ಭಾರತೀಯ ವಾಯುಪಡೆಯೊಂದಿಗೆ ಸಮನ್ವಯ ಸಾಧಿಸಿ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

