ಬೆಂಗಳೂರು : ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಸಿಆರ್ಆರ್ಸಿ (CRRC) ಸಂಸ್ಥೆಯ ಹೊಸ ರೈಲುಗಳನ್ನು ಕಾರ್ಯಾಚರಣೆಗೆ ಪರಿಚಯಿಸುವ ಮುನ್ನ, ಆಯುಕ್ತರ ರೈಲ್ವೆ ಸುರಕ್ಷತಾ (CMRS) ಅನುಮೋದನೆಗಾಗಿ ಆಗಸ್ಟ್ 7ರ ರಾತ್ರಿ ಜಂಟಿ ಪ್ರಯೋಗ ಹಾಗೂ ತಪಾಸಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಿಸಿದೆ.
ಏನಿದೆ ಬದಲಾವಣೆ?
- ಯಶವಂತಪುರದಿಂದ ಮಾದಾವರದವರೆಗೆ (ಅಪ್ ಲೈನ್) ರಾತ್ರಿ 10:30ರಿಂದ 11:00 ಗಂಟೆಯವರೆಗೆ ಮೆಟ್ರೋ ರೈಲುಗಳು ಸಾಮಾನ್ಯ 10 ನಿಮಿಷಗಳ ಬದಲಿಗೆ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.
- ಮಾದಾವರದಿಂದ ರೇಷ್ಮೆ ಸಂಸ್ಥೆಯವರೆಗೆ (ಡೌನ್ ಲೈನ್) ರೈಲು ಸಂಚಾರ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ.
ಪ್ರಯಾಣಿಕರಿಗೆ ಮನವಿ
ಬಿಎಂಆರ್ಸಿಎಲ್ ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಮನವಿ ಮಾಡಿದೆ. ತಾಂತ್ರಿಕ ಪರೀಕ್ಷೆಯ ಹಿನ್ನೆಲೆಯಲ್ಲಿ ಉಂಟಾಗುವ ಅನಾನುಕೂಲತೆಗೆ ಸಂಸ್ಥೆ ವಿಷಾದ ವ್ಯಕ್ತಪಡಿಸಿದ್ದು, ಪ್ರಯಾಣಿಕರ ಸಹಕಾರ ಕೋರಿದೆ.

