ಆನೇಕಲ್: ಕುಡಿದ ಅಮಲಿನಲ್ಲಿ ಟೆಕ್ಕಿಯೋರ್ವ ಏರ್ ಗನ್ ನಿಂದ ಸೆಕ್ಯೂರಿಟಿ ಗಾರ್ಡ್ ಗಳ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬಂಡಾಪುರದಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಅನುರಾಗ್ ತುವಾರಿ ಎಂಬಾತ ಈ ಕೃತ್ಯವೆಸಗಿದ್ದಾನೆ. ತಿವಾರಿ ವೈಟ್ ಫೀಲ್ಡ್ ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಐಟಿ ಉದ್ಯೋಗಿಯಾಗಿದ್ದಾನೆ. ಕಳೆದ 8 ತಿಂಗಳಿಂದ ಫ್ಲ್ಯಾಟ್ ಬಾಡಿಗೆ ಪಡೆದು ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ.
ಅಪಾರ್ಟ್ ಮೆಂಟ್ ನ ಬ್ರೀಸ್-1ರ B304 ಫ್ಲ್ಯಾಟ್ ನಲ್ಲಿ ವಾಸವಿದ್ದ. ರಾತ್ರಿ ಕಂಠಪೂರ್ತಿ ಕುಡಿದು ಅನುರಾಗ್ ತಿವಾರಿ ಫ್ಲ್ಯಾಟ್ ನಲ್ಲಿ ಕೂಗಾಡತೊಡಗಿದ್ದ. ಬಳಿಕ ಬಾಲ್ಕನಿಯಿಂದ ಏರ್ ಗನ್ ಮೂಲಕ ಗುಂಡಿನ ದಾಳಿ ನಡೆಸಿದ್ದಾನೆ. ಕಾರು, ಪಾರ್ಕಿಂಗ್ ಲಾಟ್ ನ ಶೀಟ್ ಗಳ ಮೇಲೆ ಫೈರಿಂಗ್ ಮಾಡಿದ್ದಾನೆ. ಫೈರಿಂಗ್ ಶಬ್ಢ ಕೇಳಿ ಸೆಕ್ಯೂರಿಟಿ ಗಾರ್ಡ್ ಗಳು ತಿವಾರಿ ಬಳಿ ಬರುತ್ತಿದ್ದಂತೆ ಅವರ ಮೇಲೂ ನಿರಂತರ ಗುಂಡಿನ ದಾಳಿ ನಡೆಸಿದ್ದಾನೆ.
ಸುಮಾರು 45 ನಿಮಿಷಗಳ ಕಾಲ ತಿವಾರಿ ಇದೇ ರೀತಿ ಗುಂಡಿನ ದಾಳಿ ನಡೆಸಿದ್ದಾನೆ. ಕೂಡಲೇ ಸೆಕ್ಯೂರಿಟಿ ಗಾರ್ಡ್ ಗಳು ಸೂರ್ಯನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟೆಕ್ಕಿ ಅನುರಾಗ್ ತಿವಾರಿಯನ್ನು ವಶಕ್ಕೆ ಪಡೆದಿದ್ದಾರೆ. ಅತನ ಬಳಿ ಇದ್ದ ಏರ್ ಗನ್, ಬಾಲ್ಸ್ ವಶಕ್ಕೆ ಪಡೆದಿದ್ದಾರೆ. ಫೈರಿಂಗ್ ಮಾಡಿರುವ ಸ್ಥಳದಲ್ಲಿ ಸೋಕೋ ಟೀಂ ನಿಂದ ಪರಿಹೀಲನೆ ನಡೆಸಲಾಗುತ್ತಿದೆ.

