ಬೆಂಗಳೂರು: ರಾಜ್ಯ ಸರ್ಕಾರವು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕರ್ನಾಟಕ ಆಡಳಿತ ಸೇವೆ (ಕೆಎಎಸ್)ಗೆ ಸೇರಿದ ಐವರು ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2) ಬುಧವಾರ ಈ ಸಂಬಂಧ ಅಧಿಸೂಚನೆ ಪ್ರಕಟಿಸಿದೆ.
ಅಧಿಸೂಚನೆಯ ಪ್ರಕಾರ, ವಿವಿಧ ಪ್ರಮುಖ ಇಲಾಖೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗಿದೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಅನ್ವಯವಾಗಲಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ವಿವರ
- ಶ್ರೀಮತಿ ಸುಶೀಲಮ್ಮ (ಕೆಎಎಸ್, ಸೂಪರ್ ಟೈಂ ಸ್ಕೇಲ್) – ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಿಂದ ಸಕಾಲ ಅಭಿಯಾನ (ಇ–ಆಡಳಿತ), ಬೆಂಗಳೂರು ಆಡಳಿತಾಧಿಕಾರಿಯಾಗಿ ನೇಮಕ.
- ಶ್ರೀ ರವಿ ಎಂ. ತಿಲಾಪುರ (ಕೆಎಎಸ್, ಸೂಪರ್ ಟೈಂ ಸ್ಕೇಲ್) – ಸ್ಥಳ ನಿರೀಕ್ಷಣೆಯಿಂದ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ.
- ಶ್ರೀ ರವಿಚಂದ್ರ ನಾಯಕ್ (ಕೆಎಎಸ್, ಆಯ್ಕೆ ಶ್ರೇಣಿ) – ಸ್ಥಳ ನಿರೀಕ್ಷಣೆಯಿಂದ ಹುಬ್ಬಳ್ಳಿ–ಅಂಕೋಲ ಬ್ರಾಡ್ ಗೇಜ್ ಯೋಜನೆಯ ವಿಶೇಷ ಜಿಲ್ಲಾಧಿಕಾರಿಯಾಗಿ, ಕಾರವಾರ ನೇಮಕ.
- ಶ್ರೀಮತಿ ಸುರೇಖಾ (ಕೆಎಎಸ್, ಹಿರಿಯ ಶ್ರೇಣಿ) – ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿ ಹುದ್ದೆಯಿಂದ ಬೀದರ್ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ.
- ಶ್ರೀ ಪ್ರಸನ್ನ ಕುಮಾರ್ ವಿ.ಕೆ. (ಕೆಎಎಸ್, ಹಿರಿಯ ಶ್ರೇಣಿ) – ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಂಟಿ ನಿರ್ದೇಶಕರ ಹುದ್ದೆಯಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಮುಖ್ಯ ಆಡಳಿತಾಧಿಕಾರಿಯಾಗಿ ನೇಮಕ.
ಅಧಿಸೂಚನೆಯಲ್ಲಿ, ಈ ಆದೇಶದಿಂದ ಸ್ಥಳ ನಿರೀಕ್ಷೆಗೆ ಬರುವ ಅಧಿಕಾರಿಗಳು ಮುಂದಿನ ಸ್ಥಳ ನಿಯುಕ್ತಿಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಕಾರ್ಯ ವರದಿ ಮಾಡಿಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ. ರಾಜ್ಯಪಾಲರ ಆದೇಶಾನುಸಾರ ಹಾಗೂ ಅವರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಕೆ.ಹೆಚ್. ಈ ಆದೇಶವನ್ನು ಹೊರಡಿಸಿದ್ದಾರೆ.



