HomeLatest News'ಅನಲಾಗ್ ಪನೀರ್' ನಿಷೇಧ; ಉಲ್ಲಂಘಿಸಿದರೆ 6 ತಿಂಗಳು ಜೈಲು ಹಾಗೂ 1 ಲಕ್ಷ ರೂ. ದಂಡ

‘ಅನಲಾಗ್ ಪನೀರ್’ ನಿಷೇಧ; ಉಲ್ಲಂಘಿಸಿದರೆ 6 ತಿಂಗಳು ಜೈಲು ಹಾಗೂ 1 ಲಕ್ಷ ರೂ. ದಂಡ

ಮುಂಬೈ- ಆಹಾರ ಕಲಬೆರಕೆ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ರಾಜ್ಯದಲ್ಲಿ ಅನಲಾಗ್ (ಡೈರಿಯೇತರ) ಪನೀರ್ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಛತ್ತೀಸ್‌ಗಢದ ನಂತರ ಇಂತಹ ನಿಷೇಧವನ್ನು ಜಾರಿಗೊಳಿಸಿದ ದೇಶದ ಎರಡನೇ ರಾಜ್ಯ ಮಹಾರಾಷ್ಟ್ರವಾಗಿದೆ.

ಅನಲಾಗ್ ಪನೀರ್‌ನ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ಸಾಗಣೆ, ಸಗಟು ಹಾಗೂ ಚಿಲ್ಲರೆ ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ರ ಅಡಿಯಲ್ಲಿ ನಿಯಮ ಉಲ್ಲಂಘಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಅಸುರಕ್ಷಿತ ಆಹಾರ ಸೇವನೆಯಿಂದ ಸಾವು ಸಂಭವಿಸಿದರೆ ಜೀವಾವಧಿ ಶಿಕ್ಷೆ ಮತ್ತು ಕನಿಷ್ಠ 10 ಲಕ್ಷ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಹಾರ ಸುರಕ್ಷತಾ ಆಯುಕ್ತ ತುಕಾರಾಮ್ ಮುಂಢೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಅನಲಾಗ್ ಪನೀರ್ ಎಂದರೇನು?

ಅನಲಾಗ್ ಪನೀರ್ ಎಂದರೇನು? ಏಕೆ ಈ ನಿಷೇಧ?

ಹಾಲಿನ ಕೊಬ್ಬಿನ ಬದಲು ತರಕಾರಿ ಕೊಬ್ಬುಗಳು, ಪಾಮ್ ಎಣ್ಣೆ ಮತ್ತು ಇತರ ಡೈರಿಯೇತರ ಪದಾರ್ಥಗಳನ್ನು ಬಳಸಿ ತಯಾರಿಸುವ ನಕಲಿ ಪನೀರ್ ಅನ್ನು ‘ಅನಲಾಗ್ ಪನೀರ್’ ಎನ್ನಲಾಗುತ್ತದೆ. ಇದು ನೋಡಲು ಅಪ್ಪಟ ಸಾಂಪ್ರದಾಯಿಕ ಪನೀರ್ ತರಹವೇ ಇದ್ದರೂ, ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡದೆ ಇದನ್ನು ಅಸಲಿ ಡೈರಿ ಉತ್ಪನ್ನವೆಂದು ಮಾರಾಟ ಮಾಡಲಾಗುತ್ತಿತ್ತು. ಇದು ಗ್ರಾಹಕರನ್ನು ದಾರಿ ತಪ್ಪಿಸುವ ಮತ್ತು ಆಹಾರ ಸುರಕ್ಷತಾ ಕಾನೂನಿನ ಅಡಿಯಲ್ಲಿ ಅನ್ಯಾಯದ ವ್ಯಾಪಾರ ಪದ್ಧತಿಯಾಗಿದೆ ಎಂದು ಆಹಾರ ಮತ್ತು ಔಷಧ ಆಡಳಿತ (FDA) ಎಚ್ಚರಿಸಿದೆ.

ಕಳೆದ ವರ್ಷವೇ ಈ ವಿಷಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತ್ತು. ಶಾಸಕರು ಅನಲಾಗ್ ಪನೀರ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ತೀವ್ರ ಒತ್ತಾಯಿಸಿದ್ದರು.

ಎಫ್‌ಡಿಎ ಕಾರ್ಯಾಚರಣೆ ಮತ್ತು ದಾಳಿಗಳು

ಮೇ ತಿಂಗಳಿನಿಂದಲೂ ಸಂಶ್ಲೇಷಿತ ಹಾಲು ಮತ್ತು ನಕಲಿ ಪನೀರ್ ಉತ್ಪಾದನಾ ಘಟಕಗಳ ವಿರುದ್ಧ ಎಫ್‌ಡಿಎ ಅಧಿಕಾರಿಗಳು ಸರಣಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪುಣೆಯ ಮಂಜರಿ ಖುರ್ದ್‌ನಲ್ಲಿರುವ ಗೋದಾಮಿನ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 1,400 ಕೆಜಿ ನಕಲಿ ಪನೀರ್, 1,800 ಕೆಜಿ ಕೆನೆ ತೆಗೆದ ಹಾಲಿನ ಪುಡಿ, 400 ಕೆಜಿ ಜಿಎಂಎಸ್ ಪುಡಿ ಹಾಗೂ 718 ಲೀಟರ್ ಪಾಮ್ ಎಣ್ಣೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಮುಂಬೈ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನೈರ್ಮಲ್ಯ ಕಾಪಾಡದ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳ ವಿರುದ್ಧವೂ ತಪಾಸಣೆ ತೀವ್ರಗೊಂಡಿದ್ದು, ನಕಲಿ ಡೈರಿ ಉತ್ಪನ್ನಗಳ ವಿರುದ್ಧದ ಈ ಸಮರವು ಗ್ರಾಹಕರ ಆರೋಗ್ಯ ರಕ್ಷಣೆಗೆ ಪ್ರಮುಖ ಹೆಜ್ಜೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular