ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಮುಂಬರುವ ಬಿಗ್ ಬಜೆಟ್ ಸಿನಿಮಾ ‘ದಿ ಪ್ಯಾರಡೈಸ್’ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಶ್ರೀಕಾಂತ್ ಒಡೇಲ ನಿರ್ದೇಶನದ ಈ ಪ್ಯಾನ್ ಇಂಡಿಯಾ ಆ್ಯಕ್ಷನ್ ಚಿತ್ರ ಸೆಪ್ಟೆಂಬರ್ ೨೪ ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. ಚಿತ್ರತಂಡ ಈಗಿನಿಂದಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದು, ಅಭಿಮಾನಿಗಳಲ್ಲಿ ಸಖತ್ ನಿರೀಕ್ಷೆ ಹುಟ್ಟುಹಾಕಿದೆ.
ಇದೀಗ ಚಿತ್ರತಂಡ ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಲು ಯೋಜನೆ ರೂಪಿಸಿದೆ. ನಾಳೆ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಲಿದ್ದು, ಇದರ ಬೆನ್ನಲ್ಲೇ ಈ ತಿಂಗಳ ಮೂರನೇ ವಾರದಲ್ಲಿ ತೆಲಂಗಾಣ ಜಾನಪದ ಶೈಲಿಯ ಸ್ಪೆಷಲ್ ಹಾಡೊಂದನ್ನು ಹಂಚಿಕೊಳ್ಳಲು ನಿರ್ಮಾಪಕರು ಸಜ್ಜಾಗಿದ್ದಾರೆ. ನಾನಿ ಮತ್ತು ಕೀರ್ತಿ ಸುರೇಶ್ ಜೊತೆಯಾಗಿ ನರ್ತಿಸಿರುವ ಈ ವಿಶೇಷ ಹಾಡಿಗೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ಸಂಗೀತ ಪ್ರಿಯರ ಮನಗೆಲ್ಲುವ ಭರವಸೆ ಮೂಡಿಸಿದೆ.
ಎಸ್ಎಲ್ವಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕಾಯಾಡು ಲೋಹರ್ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೆ ಮೋಹನ್ ಬಾಬು, ರಾಘವ್ ಜುಯಲ್ ಹಾಗೂ ಸೊನಾಲಿ ಕುಲಕರ್ಣಿ ಸೇರಿದಂತೆ ಪ್ರಮುಖ ತಾರಾಗಣವೇ ಸಿನಿಮಾದಲ್ಲಿದ್ದು, ನಾನಿ ಅಭಿಮಾನಿಗಳಿಗೆ ಹಬ್ಬದೂಟ ಸಿಗುವುದು ಖಚಿತವಾಗಿದೆ.

