ಬೆಳಗಾವಿ: ದೇವರ ಬಳಿ ಭಕ್ತರು ಸಾಮಾನ್ಯವಾಗಿ ಆರೋಗ್ಯ, ಉದ್ಯೋಗ, ಮದುವೆ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ವಿವಿಧ ಮನೋಭಿಲಾಷೆಗಳಿಗಾಗಿ ಹರಕೆ ಸಲ್ಲಿಸುವುದು ಸಾಮಾನ್ಯ. ಆದರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತನೊಬ್ಬ ಬರೆದ ವಿಚಿತ್ರ ಹರಕೆ ಪತ್ರ ಇದೀಗ ಎಲ್ಲರ ಗಮನ ಸೆಳೆದಿದೆ.
ಮಠದ ಹುಂಡಿಯಲ್ಲಿದ್ದ ಕಾಣಿಕೆಗಳನ್ನು ಎಣಿಕೆ ಮಾಡುವ ವೇಳೆ ಸಿಬ್ಬಂದಿಗೆ ಒಂದು ಪತ್ರ ಪತ್ತೆಯಾಗಿದೆ. ಅದರಲ್ಲಿ ಯುವಕನೊಬ್ಬ, “ರಾಯರೇ, ಆ ಹುಡುಗಿಯಿಂದ ನನ್ನನ್ನು ಕಾಪಾಡು. ಆಕೆಯ ಕಾಟದಿಂದ ತಪ್ಪಿಸು” ಎಂದು ಮನವಿ ಮಾಡಿದ್ದಾನೆ.
ಈ ಹರಕೆ ಪತ್ರದಲ್ಲಿ ಯುವಕ ತನ್ನ ವೈಯಕ್ತಿಕ ಸಮಸ್ಯೆಯನ್ನು ದೇವರ ಮುಂದೆ ಹಂಚಿಕೊಂಡಿರುವ ರೀತಿ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಉದ್ಯೋಗ, ಆರೋಗ್ಯ ಅಥವಾ ಕುಟುಂಬದ ಸಮಸ್ಯೆಗಳ ಕುರಿತು ಹರಕೆ ಪತ್ರಗಳು ಕಂಡುಬರುವುದಾದರೂ, ಪ್ರೇಮ ಅಥವಾ ಹುಡುಗಿಯ ಕಾಟದಿಂದ ರಕ್ಷಣೆ ಕೋರಿ ಬರೆದಿರುವ ಈ ಪತ್ರ ಅಚ್ಚರಿ ಮೂಡಿಸಿದೆ.
ಹುಂಡಿ ಎಣಿಕೆ ವೇಳೆ ಈ ಪತ್ರ ಪತ್ತೆಯಾಗಿದ್ದು, ಅಲ್ಲಿದ್ದ ಸಿಬ್ಬಂದಿ ಮತ್ತು ಭಕ್ತರ ಮುಖದಲ್ಲಿ ನಗು ಮೂಡಿಸಿದೆ. ಈ ವಿಚಿತ್ರ ಹರಕೆಯ ವಿಷಯ ಈಗ ಸ್ಥಳೀಯರಲ್ಲಿ ಕುತೂಹಲಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ.

