ಚಿಕ್ಕಮಗಳೂರು: ಬಣಕಲ್ ಸಮೀಪದ ಕಾಫಿ ತೋಟದಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಎಸ್ಟೇಟ್ ಗಳು, ರೆಸಾರ್ಟ್ ಮತ್ತು ಹೋಂ ಸ್ಟೇಗಳು ಹೆಚ್ಚಾಗಿರುವುದರಿಂದ ಕೆಲಸಕ್ಕೆ ಬಂದವರ ದಾಖಲೆಗಳನ್ನು ಪೊಲೀಸರು ಎಲ್ಲೆಡೆ ಪರಿಶೀಲಿಸಿದ್ದಾರೆ. ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ತೋಟವೊಂದರಲ್ಲಿ ಪೊಲೀಸರು ದಾಖಲೆ ಪರಿಶೀಲನೆ ನಡೆಸುವ ವೇಳೆ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ.
ಫೈಸುದ್ದೀನ್, ಜಹಾಂಗೀರ್, ನುಮನ್ ಬಶೀರ್, ಮೊಹಮ್ಮದ್ ಹುಮೈನ್, ಮೊಹಮದ್ ಹಸೀಬುಲ್ ಬಂಧಿತರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಬಾಂಗ್ಲಾದೇಶದ ಗುರುತಿನ ಚೀಟಿ ಸಿಕ್ಕಿದೆ. ಕೆಲವರು ಕುಟುಂಬ ಸಮೇತರಾಗಿ ಬಂದಿದ್ದಾರೆ. ಇಲ್ಲಿಗೆ ಹೇಗೆ ಬಂದರು? ಅವರನ್ನು ಕರೆ ತಂದ ಏಜೆಂಟರು ಯಾರು ಎನ್ನುವುದರ ಕುರಿತಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್‍ಪಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.

