HomeLatest NewsBIG NEWS : ಜಮ್ಮು-ಕಾಶ್ಮೀರದಲ್ಲಿ ಈ ವರ್ಷವೇ 35 ಭೀಕರ ಮೇಘಸ್ಫೋಟ; 31 ಮಂದಿ ಸಾವು

BIG NEWS : ಜಮ್ಮು-ಕಾಶ್ಮೀರದಲ್ಲಿ ಈ ವರ್ಷವೇ 35 ಭೀಕರ ಮೇಘಸ್ಫೋಟ; 31 ಮಂದಿ ಸಾವು

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಕೃತಿಯ ಅಬ್ಬರ ತೀವ್ರಗೊಂಡಿದೆ. ಈ ವರ್ಷ ಹವಾಮಾನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಕಂಡುಬಂದಿದ್ದು, ರಾಜ್ಯದಾದ್ಯಂತ ಇದುವರೆಗೆ 35ಕ್ಕೂ ಹೆಚ್ಚು ಮೇಘಸ್ಫೋಟ ಘಟನೆಗಳು ದಾಖಲಾಗಿವೆ.

ಈ ಪ್ರಕೃತಿ ವಿಕೋಪಗಳಿಂದಾಗಿ ಇದುವರೆಗೆ 31 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಗಳು, ರಸ್ತೆಗಳು, ಸೇತುವೆಗಳು ಸೇರಿದಂತೆ ಸಾರ್ವಜನಿಕ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ. ಹವಾಮಾನ ಇಲಾಖೆಯ ಎಚ್ಚರಿಕೆಗಳಿಂದ ಹಿಮಾಲಯದ ಪರ್ವತ ಪ್ರದೇಶದ ಜನರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.

ಅಧಿಕೃತ ಅಂಕಿ-ಅಂಶಗಳು ಹಾಗೂ ಕಾಶ್ಮೀರ್ ಅಬ್ಸರ್ವರ್ ವರದಿ ಪ್ರಕಾರ, ಜೂನ್ 1ರಿಂದ ಜುಲೈ ಮಧ್ಯಭಾಗದವರೆಗೆ ಕನಿಷ್ಠ 22 ಕ್ಲೌಡ್‌ಬರ್ಸ್ಟ್‌ ಘಟನೆಗಳು ಸಂಭವಿಸಿವೆ. ಬಳಿಕ ಜುಲೈ ದ್ವಿತೀಯಾರ್ಧದಿಂದ ಆಗಸ್ಟ್ ಆರಂಭದವರೆಗೆ ಸುರಿದ ಧಾರಾಕಾರ ಮಳೆಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಕ್ಲೌಡ್‌ಬರ್ಸ್ಟ್‌ಗಳ ಸಂಖ್ಯೆ 35ಕ್ಕೆ ಏರಿದೆ. ಭಾರೀ ಮಳೆ, ಆಕಸ್ಮಿಕ ಪ್ರವಾಹ ಮತ್ತು ಭೂಕುಸಿತಗಳಿಂದಲೇ ಹೆಚ್ಚಿನ ಸಾವು-ನೋವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಮ್ಮು ವಿಭಾಗದಲ್ಲೇ ಅತಿ ಹೆಚ್ಚು ಹಾನಿ

ಸಾವು-ನೋವು ಹಾಗೂ ಆಸ್ತಿ ಹಾನಿಯ ಬಹುಪಾಲು ಜಮ್ಮು ವಿಭಾಗದಲ್ಲೇ ಸಂಭವಿಸಿದೆ. ವಿಶೇಷವಾಗಿ ಪೂಂಚ್, ರಾಜೌರಿ, ಕಥುವಾ, ದೋಡಾ ಹಾಗೂ ಕಿಶ್ತ್ವಾರ್ ಜಿಲ್ಲೆಗಳು ಭಾರೀ ಹಾನಿಗೊಳಗಾಗಿವೆ. ಈ ಜಿಲ್ಲೆಗಳಲ್ಲಿ ಪದೇಪದೇ ಕ್ಲೌಡ್‌ಬರ್ಸ್ಟ್‌ ಹಾಗೂ ಪ್ರವಾಹ ಸಂಭವಿಸುತ್ತಿದ್ದು, ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿವೆ. ಸ್ಥಳೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

ಕಾಶ್ಮೀರ ಕಣಿವೆಯಲ್ಲೂ ಮಳೆಯ ಅಬ್ಬರ

ಕಾಶ್ಮೀರ ಕಣಿವೆಯಲ್ಲೂ ಮಳೆಯ ತೀವ್ರತೆ ಕಡಿಮೆಯಾಗಿಲ್ಲ. ವಿಶೇಷವಾಗಿ ಶೋಪಿಯಾನ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಇತ್ತೀಚೆಗೆ ಆಕಸ್ಮಿಕ ಪ್ರವಾಹ ಉಂಟಾಗಿದೆ. ಸೋಮವಾರ ಸುರಿದ ಭಾರೀ ಮಳೆಯಿಂದ ಕುಪ್ವಾರಾ, ಶೋಪಿಯಾನ್, ಬಂಡಿಪೋರಾ ಮತ್ತು ಅನಂತನಾಗ್ ಜಿಲ್ಲೆಗಳ ಹಲವು ಭಾಗಗಳಲ್ಲಿ ಕ್ಲೌಡ್‌ಬರ್ಸ್ಟ್‌ ಸಂಭವಿಸಿ ಇನ್ನಿಬ್ಬರು ಮೃತಪಟ್ಟಿದ್ದಾರೆ. ಪ್ರವಾಹದ ನೀರು ಮನೆಗಳಿಗೆ ನುಗ್ಗಿರುವುದರಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮೂಲಸೌಕರ್ಯಗಳಿಗೆ ಹಾನಿಯಾಗಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ಭಾರೀ ಮಳೆ ಹಾಗೂ ಪ್ರವಾಹದಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಹಲವೆಡೆ ಭೂಕುಸಿತ ಹಾಗೂ ಬಂಡೆಗಳು ರಸ್ತೆಗೆ ಉರುಳಿಬಿದ್ದಿರುವುದರಿಂದ ವಾಹನಗಳು ಮಧ್ಯದಲ್ಲೇ ಸಿಲುಕಿಕೊಂಡಿವೆ. ಇದರಿಂದ ಅಗತ್ಯ ವಸ್ತುಗಳ ಸರಬರಾಜಿಗೂ ತೊಂದರೆ ಉಂಟಾಗಿದೆ. ಕೃಷಿ ಭೂಮಿ, ನೀರಾವರಿ ಕಾಲುವೆಗಳು ಹಾಗೂ ಶಾಲೆಗಳಿಗೂ ಹಾನಿಯಾಗಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

ಎಚ್ಚರಿಕೆಯಿಂದ ಇರಲು ಸೂಚನೆ

ವಿಶೇಷವಾಗಿ ಚಿನಾಬ್ ಕಣಿವೆ ಸೇರಿದಂತೆ ಪರ್ವತ ಪ್ರದೇಶಗಳಲ್ಲಿ ಇನ್ನೂ ವಿಪತ್ತಿನ ಅಪಾಯ ಮುಂದುವರಿದಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮುಂದಿನ ದಿನಗಳಲ್ಲೂ ಮಳೆಯ ಸಾಧ್ಯತೆ ಇರುವುದರಿಂದ ಪ್ರವಾಹ ಪೀಡಿತ ಪ್ರದೇಶಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಹವಾಮಾನ ಇಲಾಖೆ ನೀಡುವ ಮುನ್ನೆಚ್ಚರಿಕೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದು, ಎಲ್ಲಾ ಜಿಲ್ಲೆಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ವಿಪತ್ತು ನಿರ್ವಹಣಾ ತಂಡಗಳನ್ನು ಸಜ್ಜುಗೊಳಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular