HomeLatest Newsಬೆಂಗಳೂರು ಪೇಟೆಯಲ್ಲಿ ಮೊದಲ ಬಾರಿ Fire Hydrant ಜಾಲ: ಅಗ್ನಿ ಅವಘಡಕ್ಕೆ ತ್ವರಿತ ಸ್ಪಂದನೆ

ಬೆಂಗಳೂರು ಪೇಟೆಯಲ್ಲಿ ಮೊದಲ ಬಾರಿ Fire Hydrant ಜಾಲ: ಅಗ್ನಿ ಅವಘಡಕ್ಕೆ ತ್ವರಿತ ಸ್ಪಂದನೆ

ಬೆಂಗಳೂರು-ಬೆಂಗಳೂರಿನ ಪೇಟೆ ಪ್ರದೇಶದಲ್ಲಿ ಅಗ್ನಿ ಅವಘಡಗಳ ಸಂದರ್ಭದಲ್ಲಿ ತುರ್ತು ಸ್ಪಂದನೆಗೆ ಅನುಕೂಲವಾಗುವಂತೆ ನಗರದ ರಸ್ತೆಯಲ್ಲೇ ಮೊದಲ ಬಾರಿಗೆ ‘ಫೈರ್ ಹೈಡ್ರೆಂಟ್’ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಟ್ಯಾಂಕ್ ಬಂಡ್ ರಸ್ತೆ ಹಾಗೂ ರಂಗಸ್ವಾಮಿ ಟೆಂಪಲ್ ರಸ್ತೆ (ಆರ್.ಟಿ. ರಸ್ತೆ)ಗಳಲ್ಲಿ ನೂತನವಾಗಿ ನಿರ್ಮಿಸಿರುವ ವೈಟ್ ಟಾಪಿಂಗ್ ರಸ್ತೆಗಳನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಬಿ-ಸ್ಮೈಲ್ ವತಿಯಿಂದ ಅಭಿವೃದ್ಧಿಪಡಿಸಿರುವ ಈ ಎರಡೂ ಪ್ರಮುಖ ವಾಣಿಜ್ಯ ಸಂಪರ್ಕ ರಸ್ತೆಗಳಲ್ಲಿ ಭವಿಷ್ಯದಲ್ಲಿ ಪದೇ ಪದೇ ರಸ್ತೆ ಅಗೆಯುವುದನ್ನು ತಪ್ಪಿಸುವ ಉದ್ದೇಶದಿಂದ ಬಿಡಬ್ಲ್ಯೂಎಸ್‌ಎಸ್‌ಬಿ ನೀರು ಮತ್ತು ಒಳಚರಂಡಿ ಮಾರ್ಗಗಳ ಜತೆಗೆ ಎಚ್‌ಡಿಪಿಇ ಯುಟಿಲಿಟಿ ಡಕ್ಟ್‌ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟ್ಯಾಂಕ್ ಬಂಡ್ ಮತ್ತು ಆರ್.ಟಿ. ರಸ್ತೆ ಅಭಿವೃದ್ಧಿ ವಿವರ

ಉಪ್ಪಾರಪೇಟೆ ಪೊಲೀಸ್ ಠಾಣೆಯಿಂದ ಶಾಂತಲಾ ಜಂಕ್ಷನ್‌ವರೆಗಿನ 418 ಮೀಟರ್ ಉದ್ದದ ಟ್ಯಾಂಕ್ ಬಂಡ್ ರಸ್ತೆಯನ್ನು ₹8.74 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 10.5 ಮೀಟರ್ ಅಗಲದ ಹಾಗೂ 180 ಎಂಎಂ ದಪ್ಪದ ವೈಟ್ ಟಾಪಿಂಗ್, 1000 ಎಂಎಂ ವ್ಯಾಸದ ಮಳೆನೀರು ಚರಂಡಿ, ಪಾದಚಾರಿ ಸ್ನೇಹಿ ಫುಟ್‌ಪಾತ್ ಹಾಗೂ ಪವರ್ ಮತ್ತು ಒಎಫ್‌ಸಿ ಸಂಪರ್ಕಗಳಿಗಾಗಿ ಯುಟಿಲಿಟಿ ಡಕ್ಟ್‌ಗಳನ್ನು ನಿರ್ಮಿಸಲಾಗಿದೆ.

ಮೆಟ್ರೋ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬಿಎಸ್‌ಡಬ್ಲ್ಯೂಎಂಎಲ್ ವತಿಯಿಂದ ‘eeze’ ಹೆಸರಿನ ಪ್ರಿಕಾಸ್ಟ್ ಸಾರ್ವಜನಿಕ ಶೌಚಾಲಯವನ್ನೂ ನಿರ್ಮಿಸಲಾಗಿದೆ. ಪುರುಷರು, ಮಹಿಳೆಯರು, ಮಂಗಳಮುಖಿಯರು ಹಾಗೂ ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ರ‍್ಯಾಂಪ್ ಸೌಲಭ್ಯವನ್ನೂ ಒದಗಿಸಲಾಗಿದೆ.

ಇನ್ನು ಶ್ರೀನಿವಾಸ ಮಂದಿರ ರಸ್ತೆಯಿಂದ ಅವೆನ್ಯೂ ರಸ್ತೆಯವರೆಗಿನ 645 ಮೀಟರ್ ಉದ್ದದ ಆರ್.ಟಿ. ರಸ್ತೆಯನ್ನು ₹2.52 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ 150 ಎಂಎಂ ದಪ್ಪದ ವೈಟ್ ಟಾಪಿಂಗ್, ಬೂದು ಮತ್ತು ಕೆಂಪು ಬಣ್ಣದ ಜಿಗ್-ಜಾಗ್ ಪೇವರ್‌ಗಳ ಬಫರ್ ವಲಯ ನಿರ್ಮಿಸಲಾಗಿದೆ.

ಪೇಟೆ ಪ್ರದೇಶಕ್ಕೆ ಫೈರ್ ಹೈಡ್ರೆಂಟ್ ವ್ಯವಸ್ಥೆ

ಆರ್.ಟಿ. ರಸ್ತೆಯ ವಿಶೇಷ ಆಕರ್ಷಣೆ ‘ಫೈರ್ ಹೈಡ್ರೆಂಟ್’ ಜಾಲವಾಗಿದ್ದು, ಕಿರಿದಾದ ಪೇಟೆ ಪ್ರದೇಶಗಳಲ್ಲಿ ಅಗ್ನಿಶಾಮಕ ವಾಹನಗಳು ಪ್ರವೇಶಿಸಲು ಎದುರಾಗುವ ಸಮಸ್ಯೆಗೆ ಇದು ಪರಿಹಾರವಾಗಲಿದೆ. ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ನೀರು ಲಭ್ಯವಾಗುವಂತೆ ಈ ವ್ಯವಸ್ಥೆ ರೂಪಿಸಲಾಗಿದ್ದು, ಬೆಂಗಳೂರಿನ ರಸ್ತೆಗಳಲ್ಲಿ ಇಂತಹ ಜೀವ ರಕ್ಷಕ ಮೂಲಸೌಕರ್ಯವನ್ನು ಅಳವಡಿಸುತ್ತಿರುವುದು ಇದೇ ಮೊದಲ ಬಾರಿಗೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಎರಡೂ ರಸ್ತೆಗಳಲ್ಲಿ ಪುರಾತನ ಶೈಲಿಯ (Antique finish) ಎಲ್‌ಇಡಿ ಬೀದಿ ದೀಪಗಳು ಹಾಗೂ ಥರ್ಮೋಪ್ಲಾಸ್ಟಿಕ್ ರಸ್ತೆ ಗುರುತುಗಳನ್ನು ಅಳವಡಿಸಲಾಗಿದ್ದು, ಸಂಚಾರ ಸುರಕ್ಷತೆ ಮತ್ತು ರಸ್ತೆಯ ಸೌಂದರ್ಯಕ್ಕೆ ಆದ್ಯತೆ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್, ವಿಶೇಷ ಆಯುಕ್ತ ನಿತೀಶ್, ಆಯುಕ್ತ ಜಗದೀಶ್, ಅಪರ ಆಯುಕ್ತ ವೆಂಕಟಾ ಚಲಪತಿ, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಮಾದೇಶ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular