ಮೆಕ್ಸಿಕೊ: ಪ್ರೇಮಿಯೊಂದಿಗೆ ಉಂಟಾದ ಜಗಳದ ಬಳಿಕ ಸಂಬಂಧ ಮುರಿದುಬಿದ್ದ ಹಿನ್ನೆಲೆಯಲ್ಲಿ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೆಕ್ಸಿಕೋದ ಮೆಟೆಪೆಕ್ (Metepec) ನಗರದಲ್ಲಿ ನಡೆದಿದೆ. ಆದರೆ ಮೇಲ್ಛಾವಣಿಯಿಂದ ಜಿಗಿದ ಆಕೆಯನ್ನು ಪೊಲೀಸರು ಕ್ಷಣಾರ್ಧದಲ್ಲೇ ಹಿಡಿದು ರಕ್ಷಿಸಿದ್ದು, ಈ ರೋಚಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಎಸ್ಟಾಡೋ ಡೆ ಮೆಕ್ಸಿಕೊ (Estado de México) ರಾಜ್ಯದ ಇಜ್ಕಾಲ್ಲಿ ಕ್ವೌಟೆಮೊಕ್ (Izcalli Cuauhtémoc) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರೇಮಿಯೊಂದಿಗೆ ನಡೆದ ಜಗಳ ಮತ್ತು ಬ್ರೇಕ್‌ಅಪ್‌ನಿಂದ ಮಾನಸಿಕ ಆಘಾತಕ್ಕೊಳಗಾದ ಯುವತಿ ತನ್ನ ಮನೆಯ ಮೇಲ್ಛಾವಣಿಗೆ ಏರಿ ಆತ್ಮಹತ್ಯೆಗೆ ಮುಂದಾಗಿದ್ದಳು.
ತುರ್ತು ಕಾರ್ಯಾಚರಣೆ
ಸಹಾಯಕ್ಕಾಗಿ ಬಂದ ಕರೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪುರಸಭೆ ಪೊಲೀಸರು, ನಾಗರಿಕ ರಕ್ಷಣಾ ಸಿಬ್ಬಂದಿ ಹಾಗೂ ವೈದ್ಯಕೀಯ ತುರ್ತುಸೇವಾ ಸಿಬ್ಬಂದಿ ಧಾವಿಸಿದರು. ಯುವತಿಯನ್ನು ಮನವೊಲಿಸಿ ಕೆಳಗಿಳಿಯುವಂತೆ ಸಾಕಷ್ಟು ಪ್ರಯತ್ನ ನಡೆಸಲಾಯಿತು.ಆದರೆ ಅಧಿಕಾರಿಗಳ ಮಾತು ಕೇಳದೆ ಯುವತಿ ಏಕಾಏಕಿ ಮೇಲ್ಛಾವಣಿಯಿಂದ ಹಿಂಬದಿಗೆ ಜಿಗಿದಳು. ಇದೇ ವೇಳೆ ಕೆಳಭಾಗದಲ್ಲಿ ಮುನ್ನೆಚ್ಚರಿಕೆಯಿಂದ ನಿಂತಿದ್ದ ಪೊಲೀಸರು ಆಕೆಯನ್ನು ಸಮಯಕ್ಕೆ ಸರಿಯಾಗಿ ಹಿಡಿದು ಜೀವ ಉಳಿಸಿದರು.
ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ಘಟನೆಯ ಬಳಿಕ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯಕೀಯ ಸಿಬ್ಬಂದಿ, ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆಗೆ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಘಟನೆದಲ್ಲಿ ಆಕೆಗೆ ಗಂಭೀರ ಗಾಯಗಳಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಇನ್ನೂ ಸ್ಪಷ್ಟ ಮಾಹಿತಿ ನೀಡಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ, ಪ್ರೇಮಭಂಗವೇ ಆತ್ಮಹತ್ಯೆಗೆ ಯತ್ನಿಸಲು ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಯುವತಿಯ ಜೀವ ಉಳಿದಿದೆ.

