ಹಾಸನ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಅವಾಂತರಗಳು ಸಂಭವಿಸಿದ್ದು, ವಿವಿಧೆಡೆ ರೈಲ್ವೆ ಹಳಿಗಳ ಮೇಲೆ ಗುಡ್ಡ ಕುಸಿತವಾಗಿರುವ ಹಿನ್ನೆಲೆಯಲ್ಲಿ ಇಂದು ಕೂಡ ಕೆಲ ರೈಲುಗಳ ಸಂಚಾರ ಸ್ಥಗಿತಗೊಂಡಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮೇರಿ–ಶಿರಿಬಾಗಿಲು ಬಳಿ ರೈಲ್ವೆ ಹಳಿ ಮೇಲೆ ಗುಡ್ಡಕುಸಿತವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು–ಬೆಂಗಳೂರು ಮಾರ್ಗದಲ್ಲಿ ರೈಲು ಸಂಚಾರಕ್ಕೆ ಮತ್ತೆ ಅಡಚಣೆ ಉಂಟಾಗಿದೆ. ಶನಿವಾರ ರಾತ್ರಿ ಕುಸಿದ ಮಣ್ಣು ತೆರವು ಕಾರ್ಯಾಚರಣೆ ಮಳೆಯ ನಡುವೆಯೂ ಮುಂದುವರಿದಿದ್ದು, ಇಂದು ಕೂಡ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಹಾಗೂ ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ರೈಲ್ವೆ ಹಳಿ ಮೇಲೆ ಗುಡ್ಡದಿಂದ ಮತ್ತೆ ಮತ್ತೆ ಮಣ್ಣು ಕುಸಿಯುತ್ತಿದೆ. ಇದರಿಂದಾಗಿ ತೆರವು ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುತ್ತಿದೆ. ರೈಲ್ವೆ ಹಳಿ ಮೇಲೆ ಕೆಸರು ತುಂಬಿದ್ದು, ಹಳಿಯ ಪಕ್ಕದಲ್ಲೇ ಮೇಲಿನಿಂದ ನೀರು ಧುಮ್ಮಿಕ್ಕುತ್ತಿದೆ. ಮಣ್ಣು ಮತ್ತಷ್ಟು ಕುಸಿಯದಂತೆ ರೈಲ್ವೆ ಇಲಾಖೆ ಸಿಬ್ಬಂದಿ ಮರಳಿನ ಮೂಟೆಗಳನ್ನು ಜೋಡಿಸಿ ತಡೆಗೋಡೆ ನಿರ್ಮಿಸುತ್ತಿದ್ದಾರೆ.
ಗುಡ್ಡಕುಸಿತದ ಹಿನ್ನೆಲೆಯಲ್ಲಿ ಯಶವಂತಪುರ–ಕಾರವಾರ ಎಕ್ಸ್‌ಪ್ರೆಸ್, ಮಂಗಳೂರು–ಯಶವಂತಪುರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಹಾಗೂ ಕಾರವಾರ–ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಇಂದು ಕೂಡ ಸ್ಥಗಿತಗೊಳಿಸಲಾಗಿದೆ.
ಇನ್ನು ಬೆಂಗಳೂರು–ಮುರ್ಡೇಶ್ವರ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 17377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಹಾಗೂ 17378 ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್‌ಪ್ರೆಸ್ ರೈಲುಗಳನ್ನು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮಾಡಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.
ಎಡಕುಮೇರಿ ಭಾಗದಲ್ಲಿ ತೆರವು ಕಾರ್ಯಾಚರಣೆ ಮತ್ತು ಸುರಕ್ಷತಾ ಕಾರ್ಯಾಚರಣೆ ಮುಂದುವರಿದಿರುವುದರಿಂದ, ಮಂಗಳೂರು–ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಸುವವರು ರೈಲು ಸಂಚಾರದ ಸ್ಥಿತಿಯನ್ನು ಪರಿಶೀಲಿಸಿ ಪ್ರಯಾಣಿಸುವಂತೆ ಸೂಚಿಸಲಾಗಿದೆ.

