ಬೆಂಗಳೂರು: ಮಹಿಳೆಯೊಬ್ಬರಿಗೆ ವಿಡಿಯೋ ಕರೆ ಮಾಡಿ ಖಾಸಗಿ ಅಂಗ ತೋರಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಯುವಕನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ತ್ಯಾಗರಾಜನಗರ ನಿವಾಸಿ 34 ವರ್ಷದ ಮಹಿಳೆ ನೀಡಿದ ದೂರಿನ ಅನ್ವಯ ತಮಿಳುನಾಡು ಮೂಲದ ಯುವಕನನ್ನು ಬಂಧಿಸಲಾಗಿದೆ. ಮಹಿಳೆ ಕುಟುಂಬ ಸಮೇತ ತ್ಯಾಗರಾಜನಗರದಲ್ಲಿ ವಾಸವಾಗಿದ್ದು, ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಜುಲೈ 29ರಂದು ಆರೋಪಿ ಮಹಿಳೆಗೆ ಸಂದೇಶ ಕಳುಹಿಸಿದ್ದಾನೆ. ಮರುದಿನ ಮಧ್ಯಾಹ್ನ 1 ಗಂಟೆಗೆ ಸುಮಾರಿಗೆ ವಿಡಿಯೋ ಕರೆ ಮಾಡಿ ತನ್ನ ಖಾಸಗಿ ಅಂಗ ತೋರಿಸಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ಗಾಬರಿಯಾದ ಮಹಿಳೆ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಆರೋಪಿ ಡಿಪ್ಲೋಮಾ ವ್ಯಾಸಂಗ ಮಾಡಿದ್ದು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಫೇಸ್ಬುಕ್ ನೋಡುವಾಗ ಮಹಿಳೆಯ ಫೋಟೋ ಗಮನಿಸಿದ್ದು, ನಂತರ ಅದರಲ್ಲಿದ್ದ ಮಹಿಳೆಯ ನಂಬರ್ ಪಡೆದು ಸಂದೇಶ ಕಳುಹಿಸಿದ್ದ. ಮರುದಿನ ವಿಡಿಯೋ ಕಾಲ್ ಮಾಡಿ ಖಾಸಗಿ ಅಂಗ ತೋರಿಸಿ ಅಶ್ಲೀಲವಾಗಿ ಮಾತನಾಡಿದ್ದ. ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧಿಸಲಾಗಿದೆ.

