ಬೆಂಗಳೂರು: ಬಿಡದಿ ಟೌನ್ ಶಿಪ್ ವಿರೋಧಿಸಿ ಜೆಡಿಎಸ್ ನಾಯಕರು ಕೈಗೊಂಡಿರುವ ಪಾದಯಾತ್ರೆಗೆ ದಿನಾಂಕ ಮರು ನಿಗದಿ ಮಾಡಲಾಗಿದೆ.
ಬಿಡದಿಯ ಬೈರಮಂಗಲ ವೃತ್ತದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಆಗಸ್ಟ್ 9 ರಿಂದ 11ರವರೆಗೆ ಜೆಡಿಎಸ್ ಪಾದಯಾತ್ರೆ ಕೈಗೊಂಡಿದೆ. ಚೆನ್ನಮ್ಮ ದೇವೇಗೌಡರ ನಿಧನದ ಹಿನ್ನೆಲೆಯಲ್ಲಿ ಜೆಡಿಎಸ್ ಕೈಗೊಂಡಿದ್ದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಇದೀಗ ದಿನಾಂಕ ಮರು ನಿಗದಿ ಮಾಡಲಾಗಿದೆ.
ಬಿಡದಿ ಟೌನ್ ಶಿಪ್ ನೆಪದಲ್ಲಿ 6 ಕಂದಾಯ ಗ್ರಾಮಗಳ ಬಡ ರೈತರ ಕೃಷಿ ಭೂಮಿಯನ್ನು ಕಬಳಿಸಲು ಹೊರಟಿರುವ ಜನ ವಿರೋಧಿ ಸರ್ಕಾರದ ವಿರುದ್ಧ ನ್ಯಾಯಯುತ ಹೋರಾಟ ತೀವ್ರಗೊಳ್ಳಲಿದೆ. ರೈತರ ಹಿತರಕ್ಷಣೆಗಾಗಿ ನಡೆಯುವ ಈ ಬೃಹತ್ ಪಾದಯಾತ್ರೆಯಲ್ಲಿ ನಾಡಿನ ಜನತೆ ರೈತರು ಪಾಲ್ಗೊಂಡು ಬೆಂಬಲಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

