HomeLatest Newsದುಷ್ಟಶಕ್ತಿ ನಿವಾರಣೆಗೆ ಪೂಜೆ ಮಾಡಿಸುವುದಾಗಿ ಹೇಳಿ ಮಹಿಳೆಗೆ ಬರೋಬ್ಬರಿ 2.5 ಕೋಟಿ ರೂ ವಂಚನೆ

ದುಷ್ಟಶಕ್ತಿ ನಿವಾರಣೆಗೆ ಪೂಜೆ ಮಾಡಿಸುವುದಾಗಿ ಹೇಳಿ ಮಹಿಳೆಗೆ ಬರೋಬ್ಬರಿ 2.5 ಕೋಟಿ ರೂ ವಂಚನೆ

ಬೆಂಗಳೂರು: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರೂ ಇದ್ದೇ ಇರ್ತಾರೆ ಎಂಬ ಮಾತಿದೆ. ವಂಚಕರು ಹಣ ದೋಚಲು ಏನೆಲ್ಲ ವೇಷಗಳನ್ನು ಹಾಕುತ್ತಾರೆ. ನೋಡಿ. ಖದೀಮ ಕಳ್ಳರಿಗೆ ದೇವರ ವಿಚಾರ ಎಂಬ ಆತಕವೂ ಇಲ್ಲ, ಪೊಲೀಸರ ಬಗ್ಗೆ ಭಯವೂ ಇಲ್ಲ. ದುಷ್ಟಶಕ್ತಿ ನಿವಾರಣೆ ಹಾಗೂ ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ ಖದೀಮರು ಮಹಿಳೆಯೊಬ್ಬರಿಗೆ ಬರೋಬ್ಬರಿ 2.5 ಕೋಟಿ ರೂಪಾಯಿ ವಂಚಿಸಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆ ನಿವಾಸಿ ಮಹಿಳೆಯೊಬ್ಬರಿಂದ 2.5 ಕೋಟಿ ರೂ. ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. 2.5 ಕೋಟಿ ರೂ. ನೀಡಿದರೆ 10 ಕೋಟಿ ರೂ. ಕೊಡಿಸುವುದಾಗಿ ನಂಬಿಸಿ ಹಣ ಪಡೆದ ಆರೋಪಿಗಳ ವಿರುದ್ಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ದೂರುದಾರ ಮಹಿಳೆ ಕುಮುದಾ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಚಾಮರಾಜಪೇಟೆಯಲ್ಲಿ ವಾಸವಾಗಿದ್ದಾರೆ. ಅವರ ಪುತ್ರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ. ಕುಮುದಾ ಅವರ ಮನೆಗೆ ದುಷ್ಟಶಕ್ತಿಗಳು ಪ್ರವೇಶಿಸಿದ್ದರಿಂದಲೇ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಗಳು ನಂಬಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯ ಮೇಲೆ ಸಾಲ ಪಡೆಯುವ ವಿಚಾರದಲ್ಲಿ ಪರಿಚಯವಾಗಿದ್ದ ಮಧ್ಯವರ್ತಿಗಳ ಮೂಲಕ ಕುಮುದಾ ಅವರಿಗೆ ಅಪ್ಸರ್ ಪಾಷಾ ಎಂಬಾತನನ್ನು ಬಾಬಾ ಎಂದು ಪರಿಚಯಿಸಲಾಗಿತ್ತು. ಬಳಿಕ ಮನೆಯಲ್ಲಿ ವಿಶೇಷ ಪೂಜೆ ನಡೆಸುವ ನೆಪದಲ್ಲಿ ಆರಂಭದಲ್ಲಿ 8 ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ.

ನಂತರ ಆರೋಪಿಗಳು ಮತ್ತಷ್ಟು ಹಣ ನೀಡುವಂತೆ ಕುಮುದಾ ಅವರನ್ನು ನಂಬಿಸಿದ್ದಾರೆ ಎನ್ನಲಾಗಿದೆ. ರಿಸರ್ವ್ ಬ್ಯಾಂಕ್‌ನಿಂದ 500 ಕೋಟಿ ರೂ. ಬರಲಿದೆ. ಆ ಹಣವನ್ನು ಪಡೆಯಲು ತಕ್ಷಣ ಹಣದ ಅಗತ್ಯವಿದೆ ಎಂದು ಹೇಳಿ, 2.5 ಕೋಟಿ ರೂ. ಸಾಲವಾಗಿ ನೀಡಿದರೆ ಬಳಿಕ 10 ಕೋಟಿ ರೂ. ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು.

ಆರೋಪಿಗಳ ಮಾತನ್ನು ನಂಬಿದ ಕುಮುದಾ, ಚಾಮರಾಜಪೇಟೆಯಲ್ಲಿದ್ದ ತಮ್ಮ ಮನೆಯನ್ನು 8.5 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಮನೆ ಮಾರಾಟದಿಂದ ಬಂದ ಹಣದಲ್ಲಿ 2.5 ಕೋಟಿ ರೂ.ಗಳನ್ನು ಆರೋಪಿಗಳಿಗೆ ನೀಡಿದ್ದು, ಬಳಿಕ ಹಣ ವಾಪಸ್ ಕೇಳಿದಾಗ ವಂಚನೆ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಣವನ್ನು ವಾಪಸ್ ನೀಡುವಂತೆ ಕುಮುದಾ ಕೇಳಿದಾಗ ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ಎಂದು ಹೇಳಲಾಗಿರುವ ಅಪ್ಸರ್ ಪಾಷಾ ಹಾಗೂ ಮಧ್ಯವರ್ತಿಗಳಾದ ಶಂಕರ್ ಮತ್ತು ಭರತ್ ವಿರುದ್ಧ ಸಿಸಿಬಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular