ಮಂಗಳೂರು: 25 ವರ್ಷದ ಯುವಕನೊಬ್ಬ ತನ್ನ ಅಕ್ಕನಿಗೆ ವಾಟ್ಸಪ್ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ತಾಲೂಕಿನ ಬೆಳುವಾಯಿ ಗ್ರಾಮದ ನಾಣಿಲ್ ಎಂಬಲ್ಲಿ ನಡೆದಿದೆ.
ಮೃತನನ್ನು ಬೆಳ್ತಂಗಡಿ ತಾಲೂಕಿನ ಕಾಜೂರು ಮೂಲದ ಸಯ್ಯದ್ ಅನ್ವರ್ (25) ಎಂದು ಗುರುತಿಸಲಾಗಿದೆ. ಕಳೆದ ಕೆಲವು ಸಮಯದಿಂದ ಇಸ್ಮಾಯಿಲ್ ಎಂಬವರ ಬಾಡಿಗೆ ಮನೆಯಲ್ಲಿ ಸಯ್ಯದ್ ಅನ್ವರ್ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಾಗಿದ್ದ. ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಇದೇ ವಿಚಾರ ಈ ಹಿಂದೆ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.
ಮೀನಿನ ಟೆಂಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅನ್ವರ್, ಕಳೆದ ಕೆಲವು ದಿನಗಳಿಂದ ಕೆಲಸವಿಲ್ಲದೆ ಮನೆಯಲ್ಲಿದ್ದ. ಗುರುವಾರ ಮತ್ತೆ ಪತಿ-ಪತ್ನಿ ನಡುವೆ ಗಲಾಟೆಯಾಗಿದ್ದು, ಮನನೊಂದ ಪತ್ನಿ ತನ್ನ ಎರಡು ವರ್ಷದ ಪುತ್ರನೊಂದಿಗೆ ತವರು ಮನೆಗೆ ತೆರಳಿದ್ದರು. ಇದರಿಂದ ತೀವ್ರ ಬೇಸರಗೊಂಡಿದ್ದ ಅನ್ವರ್, ಶುಕ್ರವಾರ ಬೆಳಗ್ಗೆ ತನ್ನ ಅಕ್ಕನಿಗೆ ವಾಟ್ಸಪ್ ಮೂಲಕ ವಾಯ್ಸ್ ಮೆಸೆಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದ.
ಇದನ್ನು ಕೇಳಿ ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಆತ ವಾಸವಿದ್ದ ಬಾಡಿಗೆ ಮನೆಗೆ ಧಾವಿಸಿ ಬಂದಾಗ, ಅನ್ವರ್ ಅಷ್ಟರಲ್ಲಾಗಲೇ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮೂಡುಬಿದಿರೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

