ಬೆಂಗಳೂರು: ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಅವರು ನಿನ್ನೆ ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದರು.
ಜೈಲಿನಲ್ಲಿನ ಅಗತ್ಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ವಿನಯ್ ಕುಲಕರ್ಣಿ ಯಾವುದೇ ಮಾಧ್ಯಮ ಪ್ರತಿಕ್ರಿಯೆ ನೀಡದೆ ಹೊರಬಂದರು. ಈ ವೇಳೆ ಜೈಲಿನ ಹೊರಭಾಗದಲ್ಲಿ ಸೇರಿದ್ದ ಅವರ ಬೆಂಬಲಿಗರು ಹೂಮಾಲೆ ಹಾಕಿ ಸ್ವಾಗತಿಸಿದರು. ಕೈ ಬೀಸಿ ಬೆಂಬಲಿಗರ ಅಭಿನಂದನೆ ಸ್ವೀಕರಿಸಿದ ಅವರು ಅಲ್ಲಿಂದ ತೆರಳಿದರು.
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ಏಪ್ರಿಲ್ 2026ರಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ ಹಲವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಳಿಕ ಅವರು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿ ಶಿಕ್ಷೆಗೆ ತಡೆ ಹಾಗೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಜೀವಾವಧಿ ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿ ಜಾಮೀನು ಮಂಜೂರು ಮಾಡಿದೆ.
ಯೋಗೇಶ್ ಗೌಡ ಅವರು ಧಾರವಾಡ ಜಿಲ್ಲೆಯ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದು, 2016ರ ಜೂನ್ 15ರಂದು ಜಿಮ್ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದರು. ಈ ಪ್ರಕರಣದ ತನಿಖೆಯನ್ನು ಬಳಿಕ ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನಿಖೆಯ ಆಧಾರದ ಮೇಲೆ ವಿಶೇಷ ನ್ಯಾಯಾಲಯವು ವಿನಯ್ ಕುಲಕರ್ಣಿ ಸೇರಿದಂತೆ ಹಲವು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು.

